

ಬೆಂಗಳೂರು : ಗ್ರಾಹಕರು ಕೇಳುವ ಕಂಪನಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಗುಂಟೆಯ ಕೆ.ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ(೩೧), ಕಿರಣ್ ಕುಮಾರ್ ಅಲಿಯಾಸ್ ಕಿರಣ್(೨೭), ಅಂಜಿನಿ ಅಲಿಯಾಸ್ ಅಂಜಿ(೨೩) ಬಂಧಿತರು. ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ೧೨.೫೦ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ೧೬ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಸೋಲದೇವನಹಳ್ಳಿ ಠಾಣೆ ೯, ಶಿರಾ, ತುಮಕೂರು ಟೌನ್, ನೆಲಮಂಗಲ ಗ್ರಾಮೀಣ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಸೇರಿ ಒಟ್ಟು ೧೩ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯ ಚಿಕ್ಕಸಂದ್ರ ನಿವಾಸಿ ಲೋಕೇಶ್ ಎಂಬುವವರು ಗಾರೆ ಕೆಲಸ ಮಾಡುತ್ತಾರೆ. ಆ.೧೩ರಂದು ತರಬನಹಳ್ಳಿ ಉಡುಪಿ ಹೋಟೆಲ್ ಕಟ್ಟಡದ ಸೆಲ್ಲಾರ್‌ನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಬಜಾಜ್ ಪಲ್ಸರ್ ದ್ವಿಚಕ್ರ ವಾಹನ ನಿಲುಗಡೆ ಮಾಡಿ ಕೆಲಸಕ್ಕೆ ತೆರಳಿದ್ದರು. ಮಾರನೇ ದಿನ ಬಂದು ನೋಡಿದಾಗ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಗಲಿನಲ್ಲಿ ಆಟೋ ಚಾಲನೆ ರಾತ್ರಿ ವೇಳೆ ಕಳ್ಳತನ:
ಬಂಧಿತ ಆರೋಪಿಗಳ ಪೈಕಿ ಮಲ್ಲಿಕಾರ್ಜುನ ಬಳ್ಳಾರಿ ಜಿಲ್ಲೆ ಸಂಡೂರು ಮೂಲದವನು. ೨೦೦೯-೧೦ನೇ ಸಾಲಿನಲ್ಲಿ ಸಂಡೂರಿನಲ್ಲಿ ಕಬ್ಬಿಣದ ಹ್ಯಾಂಗ್ಲರ್‌ಗಳನ್ನು ಕಳವು ಮಾಡಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಬಂದಿದ್ದ. ಕಳೆದ ೮ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಲಾರಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಆರೋಪಿ ಕಿರಣ್ ಕುಮಾರ್ ಹಾಸನ ಜಿಲ್ಲೆ ಅರಸಿಕೆರೆ ಮೂಲದವನು. ಸುಮಾರು ೯ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಲೋಡ್ ಮತ್ತು ಅನ್‌ಲೋಡ್ ಕೆಲಸ ಮಾಡಿಕೊಂಡಿದ್ದ. ಇನ್ನು ಆರೋಪಿ ಅಂಜಿನಿ ಬಳ್ಳಾರಿ ಜಿಲ್ಲೆ ಸಂಡೂರು ಮೂಲದವನು. ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದ.
ಮೂವರು ಆರೋಪಿಗಳು ಕೆಲ ವರ್ಷಗಳಿಂದ ಪರಸ್ಪರ ಪರಿಚಿತರು. ಬಾಗಲಗುಂಟೆಯಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದರು. ಮೂವರು ಹಗಲಿನಲ್ಲಿ ಆಟೋ ಚಾಲನೆ ಮಾಡಿಕೊಂಡು ರಾತ್ರಿ ವೇಳೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಗ್ರಾಹಕರುಗಳು ಕೇಳಿದಂತಹ ದ್ವಿಚಕ್ರ ಕಳವು
ಆರೋಪಿಗಳು ದುಶ್ಚಟಗಳ ದಾಸರಾಗಿದ್ದಾರೆ. ತಮ್ಮ ಚಟಗಳು ಹಾಗೂ ಮೋಜೀನ ಜೀವನಕ್ಕಾಗಿ ಸುಲಭವಾಗಿ ಹಣ ಹೊಂದಿಸಲು ದ್ವಿಚಕ್ರ ವಾಹನ ಕಳ್ಳತನಕ್ಕೆ ಇಳಿದಿದ್ದರು. ರಾತ್ರಿ ವೇಳೆ ಮನೆ ಎದುರು, ಪಾರ್ಕಿಂಗ್ ಸ್ಥಳಗಳು, ಕಚೇರಿಗಳ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಗಳನ್ನು ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ಕದ್ದ ದ್ವಿಚಕ್ರ ವಾಹನಗಳನ್ನು ಬಳ್ಳಾರಿ, ಸಂಡೂರು ಕಡೆಗೆ ತೆಗೆದುಕೊಂಡು ಹೋಗಿ ಗ್ರಾಹಕರುಗಳನ್ನು ಹುಡುಕಿ ಮಾರಾಟ ಮಾಡಿ ಹಣ ಪಡೆದು ಹಂಚಿಕೊಂಡು ಮೋಜು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿಗಳು ಬಳ್ಳಾರಿ ಹಾಗೂ ಸಂಡೂರು ಕಡೆ ಗ್ರಾಹಕರುಗಳು ಕೇಳಿದ ಕಂಪನಿ ದ್ವಿಚಕ್ರ ವಾಹನಗಳನ್ನು ಬೆಂಗಳೂರಿನಲ್ಲಿ ಹುಡುಕಿ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು.