

ಬೆಂಗಳೂರು: ನಕಲಿ ಕೀ ಬಳಸಿ ಮಹಿಳೆಯ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪಿ ಸೇರಿ ಮೂವರನ್ನು ಬಂಧಿಸಿರುವ ಕೆಂಪೇಗೌಡ ನಗರ ಠಾಣೆ ಪೊಲೀಸರು ೭೨ ಗ್ರಾಂ ಚಿನ್ನಾಭರಣ ಮತ್ತು ನಗದು ವಶಪಡಿಸಿಕೊಂಡಿದ್ದಾರೆ.
ಗವೀಪುರಂ ಗುಟ್ಟಹಳ್ಳಿ ನಿವಾಸಿಗಳಾದ ಕಿರಣ್(೩೦), ನಾರಾಯಣ(೪೦) ಮತ್ತು ಆನಂದ್(೩೦) ಬಂಧಿತರು.
ಮಾ.೨೯ ರಂದು ನಕಲಿ ಕೀ ಬಳಸಿ ಮಹಿಳೆಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಮಹಿಳೆ ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಮಹಿಳೆಯು ಮೊಟ್ಟೆ ಅಂಗಡಿ ಇಟ್ಟುಕೊಂಡಿದ್ದು, ಇವರ ಅಂಗಡಿಯ ಪಕ್ಕದಲ್ಲಿ ಆರೋಪಿ ಕಿರಣ ಕಟಿಂಗ್ ಶಾಪ್ ಇಟ್ಟುಕೊಂಡಿದ್ದ. ಮೊಟ್ಟೆ ವ್ಯಾಪಾರದ ಹಣವನ್ನು ಮನೆಯಲ್ಲಿ ಮಹಿಳೆ ಇಡುವುದನ್ನು ಆರೋಪಿ ಗಮನಿಸಿದ್ದ. ಹೇಗಾದರೂ ಮಾಡಿ ಮನೆ ಕೀಯನ್ನು ಎಗರಿಸಿ ನಕಲಿ ಕೀಯನ್ನು ಮಾಡಿಸಿಕೊಂಡು ಮನೆಯನ್ನು ದೋಚಬೇಕು ಎಂದು ಸ್ನೇಹಿತರಾದ ಉಳಿದ ಇಬ್ಬರು ಆರೋಪಿಗಳ ಜತೆ ಸಂಚು ರೂಪಿಸಿದ್ದ. ದೂರುದಾರ ಮಹಿಳೆಯ ಮಗಳು ಬ್ಯೂಟಿಷಿಯನ್ ಆಗಿದ್ದು, ತಾಯಿ ಮತ್ತು ಮಗಳ ಇಬ್ಬರ ಬಳಿ ಎರಡು ಕೀಗಳು ಇರುವುದನ್ನು ಆರೋಪಿ ಗಮನಿಸಿದ್ದ. ಆರೋಪಿಗಳು ಮೊದಲೇ ಸಂಚು ರೂಪಿಸಿದಂತೆ ಮಗಳನ್ನು ಆರೋಪಿ ನಾರಾಯಣನ ಮನೆಗೆ ಆಕೆಯ ಪತ್ನಿಗೆ ಮೇಕಪ್ ಮಾಡಲು ಕರೆಸಿಕೊಳ್ಳುತ್ತಾರೆ. ಆಕೆ ಮೇಕಪ್ ಮಾಡುವುದರಲ್ಲಿ ತಲ್ಲಿನಳಾಗಿದ್ದಾಗ ಬ್ಯಾಗಿನಲ್ಲಿದ್ದ ಅಸಲಿ ಕೀಯನ್ನು ಕದ್ದು, ನಕಲಿ ಕೀಯನ್ನು ಮಾಡಿಸಿಕೊಂಡು ಮತ್ತೆ ಅದೇ ಬ್ಯಾಗಿನಲ್ಲಿ ಅಸಲಿ ಕೀಯನ್ನು ಇಟ್ಟಿದ್ದಾರೆ. ನಂತರ ಮಾ.೨೯ ರಂದು ದೂರುದಾರ ಮಹಿಳೆ ಮೊಟ್ಟೆ ಅಂಗಡಿಗೆ ಬಂದು ವ್ಯಾಪಾರಕ್ಕೆ ಕುಳಿತ ತಕ್ಷಣ, ಆಕೆಯ ಮಗಳನ್ನು ಆರೋಪಿಗಳು ಮೇಕಪ್ ಮಾಡಲು ಜಯನಗಕ್ಕೆ ಬರುವಂತೆ ಹೇಳುತ್ತಾರೆ. ಆಕೆ ನಾನು ಮಂಡ್ಯದಲ್ಲಿರುವ ದೇವಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾಗ. ಕಳ್ಳತನ ಮಾಡಲು ಇದೇ ಸಮಯ ಎಂದು ನಿರ್ಧರಿಸಿದ ಆರೋಪಿಗಳು ಮೂವರು ಸೇರಿ ಆಕೆಯ ಮನೆಯಲ್ಲಿದ್ದ ನಗದು, ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗುತ್ತಾರೆ.
ಹುಂಡಿಗೆ ೨೦ ಸಾವಿರ ರೂ. ಹಾಕಿದ್ದರು:
ಕಳ್ಳತನ ಯಶಸ್ವಿಯಾದರೆ ೨೦ ಸಾವಿರ ರೂ. ಹಣ ಮಹದೇಶ್ವರನ ಹುಂಡಿಗೆ ಹಾಕುವುದಾಗಿ ಆರೋಪಿಗಳು ಹರಕೆ ಹೊತ್ತುಕೊಂಡಿರುತ್ತಾರೆ. ಅದರಂತೆ ಆರೋಪಿಗಳು ಹಣ ಕದ್ದು ನೇರ ಮಹದೇಶ್ವರ ಬೆಟ್ಟಕ್ಕೆ ತೆರಳಿ ೨೦ ಸಾವಿರ ರೂ. ನಗದನ್ನು ದೇವರ ಹುಂಡಿಗೆ ಹಾಕಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.