

ಬೆಂಗಳೂರು: ಮೂವರು ಕುಖ್ಯಾತ ವಾಹನ ಕಳ್ಳರನ್ನು ಬಂಧಿಸಿರುವ ಕೋರಮಂಗಲ ಪೊಲೀಸರು ಆರೋಪಿಗಳಿಂದ ೧೦.೬೫ ಲಕ್ಷ ರೂ. ಮೌಲ್ಯದ ೫ ಕಾರು ಮತ್ತು ೨ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಕೆಂಗೇರಿ ಸಮೀಪದ ಚಲ್ಲಘಟ್ಟ ನಿವಾಸಿಗಳಾದ ತೇಜ(೨೨) ದೀಪಕ್(೨೩) ಮತ್ತು ಭರತ್(೨೨) ಬಂಧಿತರು.
ಡಿ.೨೬ ಕೋರಮಂಗಲದಲ್ಲಿ ಕಾರು ಕಳ್ಳತನವಾಗಿರುವ ಬಗ್ಗೆ ವ್ಯಕ್ತಿಯೊಬ್ಬರು ಕೋರಮಂಗಲದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಾಹನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಅವರು, ಎಸಿಪಿ ಕೆ.ಸಿ. ಲಕ್ಷ್ಮೀನಾರಾಯಣ ಅವರ ನೇತೃತ್ವದಲ್ಲಿ ಕೋರಮಂಗಲ ಇನ್‌ಸ್ಪೆಕ್ಟರ್ ಮತ್ತು ಸಬ್ ಇನ್‌ಸ್ಪೆಕ್ಟರ್ ಒಳಗೊಂಡ ಒಂದು ತಂಡ ರಚಿಸಲಾಗಿತ್ತು. ಆ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳು ನಕಲಿ ಕೀ ಬಳಸಿ ವಾಹನಗಳನ್ನು ಕದಿಯುತ್ತಿದ್ದರು. ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಕೋರಮಂಗಲ ಎರಡು, ಬನಶಂಕರಿ, ರಾಜರಾಜೇಶ್ವರಿ ನಗರ, ಸುಬ್ರಮಣ್ಯನಗರ, ಜಯನಗರ, ಹನುಮಂತನಗರ, ಕೆಂಗೇರಿ ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣ ಸೇರಿ ಒಟ್ಟು ೮ ವಾಹನ ಕಳವು ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.