ಮೂವರು ಕುಖ್ಯಾತ ಸರಗಳ್ಳರ ಬಂಧನ

Arrest Kaidhi
Published on

ಬೆಂಗಳೂರು: ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿ ಸರಗಳವು ಮಾಡುತ್ತಿದ್ದ ರೌಡಿ ಶೀಟರ್ ಸೇರಿ ಮೂವರು ಕುಖ್ಯಾತ ಸರಗಳ್ಳರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಿಪಟೂರು ಮೂಲದ ಅಭಿಜಿತ್ ಅಲಿಯಾಸ್ ಜೀತು(೩೨), ಸಲ್ಮಾನ್ ಅಲಿಯಾಸ್ ಹೆಬ್ಬೆಟ್ಟು(೨೦), ರಾಕೇಶ್ ಅಲಿಯಾಸ್ ರವಿ(೨೬) ಬಂಧಿತರು. ಆರೋಪಿಗಳಿಂದ ೩.೭೦ ಲಕ್ಷ ರೂ. ಮೌಲ್ಯದ ೬೮ ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚೆಗೆ ಮಹಿಳೆಯೊಬ್ಬರು ಕೆಲಸ ಮುಗಿಸಿಕೊಂಡು ಸೋಲದೇವನಹಳ್ಳಿಯ ಕೆಂಪಾಪುರ ಪೈಪ್‌ಲೈನ್ ರಸ್ತೆಯಲ್ಲಿ ನಡೆದು ಹೋಗುವಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದು ವಿಳಾಸ ಕೇಳುಪ ನೆಪದಲ್ಲಿ ಏಕಾಏಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧ ಪ್ರಕರಣಗಳಲ್ಲಿ ಭಾಗಿ:
ತಿಪಟೂರು ಮೂಲದ ಬಂಧಿತ ಮೂವರು ಆರೋಪಿಗಳು ಸ್ನೇಹಿತರಾಗಿದ್ದು, ಅಪರಾಧ ಹಿನ್ನೆಲೆವುಳ್ಳವರಾಗಿದ್ದು, ಅಭಿಜಿತ್ ತಿಪಟೂರು ಟೌನ್ ಠಾಣೆ ರೌಡಿ ಶೀಟರ್ ಆಗಿದ್ದಾನೆ. ಈ ಹಿಂದೆ ಹೊನ್ನವಳ್ಳಿ, ಗುಬ್ಬಿ, ಗಂಡಸಿ, ತಿಪಟೂರು ಟೌನ್ ಠಾಣೆ ವ್ಯಾಪ್ತಿಯಲ್ಲಿ ಕನ್ನ ಕಳವು, ಪೋಕ್ಸೋ ಪ್ರಕರಣಗಳಲ್ಲಿ ಬಂಧಿತನಾಗಿ ಜೈಲಿಗೆ ಹೋಗಿ ಬಂದಿದ್ದಾನೆ. ಮತ್ತೊಬ್ಬ ಆರೋಪಿ ಸಲ್ಮಾನ್ ತಿಪಟೂರು ಟೌನ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವುದು ತನಿಯಿಂದ ತಿಳಿದು ಬಂದಿದೆ. ಆರೋಪಿಗಳ ಬಂಧನದಿಂದ ಸೋಲದೇವನಹಳ್ಳಿ, ನಂದಿನಿ ಲೇಔಟ್, ಸುಬ್ರಮಣ್ಯನಗರ, ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಲಾ ಒಂದು ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ.

ಸಾಲ ತೀರಿಸಲು ಸರಗಳ್ಳತನ:
ಆರೋಪಿ ಅಭಿಜಿತ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಡಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಈ ಸಾಲ ತೀರಿಸಲು ಉಳಿದ ಆರೋಪಿಗಳ ಜತೆಗೆ ಸೇರಿಕೊಂಡು ಸರಗಳ್ಳತನಕ್ಕೆ ಇಳಿದಿದ್ದ. ಆರೋಪಿಗಳು ತಿಪಟೂರಿನಿಂದ ಬೆಂಗಳೂರಿಗೆ ಬಂದು ಸೋಲದೇವನಹಳ್ಳಿ ಮತ್ತು ಪೀಣ್ಯದಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಮನೆ ಹುಡುಕಬೇಕು ಎಂದು ಸಂಬಂಧಿಕರ ಬಳಿ ಹೇಳಿ ಅವರ ದ್ವಿಚಕ್ರ ವಾಹನ ಪಡೆದು ನಗರದ ವಿವಿಧೆಡೆ ಸುತ್ತಾಡಿ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಹಿಂಬಾಲಿಸಿ ವಿಳಾಸ ಕೇಳುವ ನೆಪದಲ್ಲಿ ಏಕಾಏಕಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತು ಪರಾರಿಯಾಗುತ್ತಿದ್ದರು. ಸುಲಿಗೆ ಬಳಿಕ ಆರೋಪಿಗಳು ಸಂಬಂಧಿಕರ ಮನೆಗೆ ತೆರಳಿ ದ್ವಿಚಕ್ರ ವಾಹನ ವಾಪಾಸ್ ನೀಡಿ, ಮಾರನೇ ದಿನ ತಿಪಟೂರಿಗೆ ತೆರಳಿ ಕದ್ದಿರುವ ಚಿನ್ನಾಭರಣ ಮಾರಾಟ ಮಾಡಿ ಹಣ ಪಡೆಯುತ್ತಿದ್ದರು. ಬಳಿಕ ಸಮವಾಗಿ ಆ ಹಣ ಹಂಚಿಕೊಂಡು ಮೋಜು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net