

ಬೆಂಗಳೂರು: ಬೆಂಗಳೂರು ಬಂದ್ ಸಂದರ್ಭದಲ್ಲಿ ರ‌್ಯಾಪಿಡೋ ಸವಾರನಿಗೆ ಮೊಟ್ಟೆ ಹೊಡೆದು ದುಂಡಾವರ್ತನೆ ತೋರಿದ ಆರೋಪದ ಮೇರೆಗೆ ಮೂವರು ಕ್ಯಾಬ್ ಚಾಲಕರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕ್ಯಾಬ್ ಚಾಲಕರಾದ ಪುನೀತ್, ಮಣಿ ಹಾಗೂ ಶರವಣನ್ ಬಂಧಿತರು. ಆರೋಪಿಗಳು ಬಾಡಿಗೆ ನೆಪದಲ್ಲಿ ರ‌್ಯಾಪಿಡೋ ಬೈಕ್ ಸವಾರ ವಿಜಯ್ ಕುಮಾರ್‌ನನ್ನು ಸ್ಥಳಕ್ಕೆ ಕರೆಸಿಕೊಂಡು ಆತನ ಮೇಲೆ ಹಲ್ಲೆ ನಡೆಸಿದ್ದರು. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೂಡಲೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ವಿಡಿಯೋ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಜುನಾಥ ನಗರಕ್ಕೆ ರ‌್ಯಾಪಿಡೋ ಬೈಕ್ ಅನ್ನು ಕ್ಯಾಬ್ ಚಾಲಕರು ಬುಕ್ ಮಾಡಿದ್ದರು. ಆಗ ಗ್ರಾಹಕರು ಎಂದು ಭಾವಿಸಿ ಅಲ್ಲಿಗೆ ಬಂದ ರ‌್ಯಾಪಿಡೋ ಸವಾರ ವಿಜಯ್ ಕುಮಾರ್ ತಲೆಗೆ ಮೊಟ್ಟೆ ಹೊಡೆದು ಆರೋಪಿಗಳು ಬೆದರಿಕೆ ಹಾಕಿದ್ದರು. ಈ ಬಗ್ಗೆ ಸವಾರ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ಬಾಗಲುಗುಂಟೆ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.