ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳ ಸೆರೆ

arrest
Published on

ಬೆಂಗಳೂರು: ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೆ ಯತ್ನ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಗದೆ ಕಳೆದ ೧೯ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಹಾಸನ ಜಿಲ್ಲೆ ಆಲೂರು ಗ್ರಾಮದ ನಿವಾಸಿ ದೊಡ್ಡೇಗೌಡ ಅಲಿಯಾಸ್ ಚಂದ್ರು(೪೫) ಬಂಧಿತ. ಆರೋಪಿಯು ೨೦೦೫ ರಲ್ಲಿ ಹನುಮಂತನಗರದ ೫೦ ಅಡಿ ರಸ್ತೆಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಬೇಕರಿ ಮಾಲೀಕನ ಜತೆಗೆ ಜಗಳ ಮಾಡಿಕೊಂಡು ಕೆಲಸ ಬಿಟ್ಟಿದ್ದ. ಈ ದ್ವೇಷದ ಹಿನ್ನೆಲೆಯಲ್ಲಿ ೨೦೦೫ರ ಜ.೧೩ರ ರಾತ್ರಿ ಸುಮಾರು ೮.೩೦ಕ್ಕೆ ಬೇಕರಿ ಮಾಲೀಕನ ಮನೆಗೆ ನುಗ್ಗಿ ಅವರ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಈ ಸಂಬಂಧ ಹನುಮಂತನಗರ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯ ಪತ್ತೆಗೆ ಶೋಧ ನಡೆಸಿದ್ದರು. ಆದರೆ, ಆತ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಆರೋಪಿಯ ಬಂಧನಕ್ಕೆ ಹಲವು ಬಾರಿ ವಾರೆಂಟ್ ಹೊರಡಿಸಿತ್ತು. ಆರೋಪಿಯು ಪತ್ತೆಯಾಗದ ಹಿನ್ನೆಲೆಯಲ್ಲಿ ೨೦೨೦ನೇ ಸಾಲಿನಲ್ಲಿ ಈ ಪ್ರಕರಣವನ್ನು ಲಾಂಗ್ ಪೆಂಡಿಂಗ್ ರಿಪೋರ್ಟ್(ಎಲ್‌ಪಿಆರ್) ಪ್ರಕರಣವೆಂದು ಆದೇಶಿಸಿತ್ತು.


ಗಿರಿನಗರ ಠಾಣೆ:
ಕಳೆದ ೮ ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ವಿಳ್ಳುಪುರಂ ಜಿಲ್ಲೆಯ ಹೇಮಾಪುರ ನಿವಾಸಿ ಶಕ್ತಿವೇಲು(೪೦) ಬಂಧಿತ. ಆರೋಪಿಯ ೨೦೧೬ರಲ್ಲಿ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರಕುಳ ನೀಡಿದ್ದ. ಈ ಸಂಬಂಧ ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಪ್ರಕರಣವನ್ನು ನ್ಯಾಯಾಲಯವು ಲಾಂಗ್ ಪೆಂಡಿಂಗ್ ರಿಪೋರ್ಟ್(ಎಲ್‌ಪಿಆರ್) ಎಂದು ಆದೇಶಿಸಿತ್ತು.
ಇದರ ಬೆನ್ನಲ್ಲೇ ಆರೋಪಿಯ ಬಂಧನಕ್ಕೆ ರಚಿಸಲಾಗಿದ್ದ ಪೊಲೀಸರ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪೇಗೌಡನಗರ ಠಾಣೆ:
ಮತ್ತೊಂದು ಪ್ರಕರಣದಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ, ಡಕಾಯಿತಿ ಪ್ರಕರಣದಲ್ಲಿ ಭಾಗಿಯಾಗಿ ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಯನ್ನು ಕೆಂಪೇಗೌಡನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ನಗರ ನಿವಾಸಿ ಜಗದೀಶ್(೩೫) ಬಂಧಿತ. ಆರೋಪಿಯು ಕೆಂಪೇಗೌಡನಗರ ಠಾಣೆ ರೌಡಿ ಶೀಟರ್ ಆಗಿದ್ದಾನೆ. ಈತ ಕೆಂಪೇಗೌಡನಗರ ಠಾಣೆಯಲ್ಲಿ ದಾಖಲಾಗಿದ್ದ ಶಸ್ತ್ರಾಸ್ತ್ರ ಕಾಯ್ದೆ ಮತ್ತು ವಿಶ್ವೇಶಪುರ ಠಾಣೆಯಲ್ಲಿ ದಾಖಲಾಗಿದ್ದ ಡಕಾಯಿತಿ ಪ್ರಕರಣದಲ್ಲಿ ಜೈಲು ಸೇರಿದ್ದ. ಬಳಿಕ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಕಳೆದ ಒಂದು ವರ್ಷದಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಆರೋಪಿಯ ಬಂಧನಕ್ಕೆ ವಾರೆಂಟ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಯ ಬಂಧನಕ್ಕೆ ರಚಿಸಲಾಗಿದ್ದ ಪೊಲೀಸರ ವಿಶೇಷ ತಂಡವು ಇತ್ತೀಚೆಗೆ ಆರೋಪಿಯು ಕೆಂಪಾಂಬುದಿ ಕೆರೆ ಬಳಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net