

ಬೆಂಗಳೂರು: ವ್ಹೀಲಿಂಗ್ ಮಾಡುತ್ತಿದ್ದಾಗ ಹಿಡಿಯಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಬೈಕ್ ಸವಾರನನ್ನು ಹೆಬ್ಬಾಳ ಗಸ್ತು ಸಿಬ್ಬಂದಿ ಬಂಧಿಸಿದ್ದಾರೆ.
ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಹೆಬ್ಬಾಳದ ನರೇಶ್ ಅಲಿಯಾಸ್ ಗುರು ನರೇಶ್ (26) ಬಂಧಿತ. ಫೆ.26ರ ಬೆಳಗಿನ ಜಾವ 1.30ರಲ್ಲಿ ಹೆಬ್ಬಾಳದ ಪೀಳೇಕಮ್ಮ ದೇವಸ್ಥಾನದ ಮುಂಭಾಗ 10 ದ್ವಿಚಕ್ರ ವಾಹನಗಳಲ್ಲಿ ಹಲವು ಮಂದಿ ವ್ಹೀಲಿಂಗ್ ಮಾಡಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದರು. ಗಸ್ತು ಪೊಲೀಸರು ತಡೆದು ವಶಕ್ಕೆ ಪಡೆಯಲು ಮುಂದಾದಾಗ ಹಲ್ಲೆ ನಡೆಸಿ ತಪ್ಪಿಸಿಕೊಂಡಿದ್ದರು. ನಂತರ ಕಾರಿನಲ್ಲಿ ತೆರಳುತ್ತಿದ್ದ ಯುವತಿಯರನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ಕೊಟ್ಟಿದ್ದರು. ಅಷ್ಟೊತ್ತಿಗೆ ಸವಾರರ ಬೆನ್ನತ್ತಿದ್ದ ಪೊಲೀಸರು ಸ್ಥಳಕ್ಕೆ ಬರುತ್ತಿದಂತೆ ತಪ್ಪಿಸಿಕೊಂಡಿದ್ದರು. ತಪ್ಪಿಸಿಕೊಳ್ಳುವ ಯತ್ನದಲ್ಲಿ ದ್ವಿಚಕ್ರ ವಾಹನಗಳು ಆಯತಪ್ಪಿ ಬಿದ್ದ 6 ಸವಾರರು ಸೆರೆಸಿಕ್ಕಿದ್ದರು. ಇನ್ನೂ ಕೆಲವರು ಪರಾರಿಯಾಗಿದ್ದರು. ಅದರಲ್ಲಿ ನರೇಶ್ ಸಹ ಒಬ್ಬನಾಗಿದ್ದ. ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಖಾಕಿ ಸೋಗಿನಲ್ಲಿ ಬೆದರಿಕೆ: ತಡರಾತ್ರಿ ಬೈಕ್ ವ್ಹೀಲಿಂಗ್ ಮಾಡುವ ಜತೆಗೆ ಜಾಲಿ ರೈಡ್ಗೆ ಬರುವ ಪ್ರೇಮಿಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಆರೋಪ ಸಹ ಕೇಳಿಬಂದಿದೆ.
ಸುಳಿವು ನೀಡಿದ ವಿಡಿಯೋ
ಪೊಲೀಸರಿಂದ ತಪ್ಪಿಸಿಕೊಂಡಿದ್ದ ನರೇಶ್ ಬಂಧನಕ್ಕೆ ಬಲೆಬೀಸಿದ್ದ ಪೊಲೀಸರಿಗೆ ವಾಟ್ಸ್ಆಪ್ ಗ್ರೂಪ್ನಲ್ಲಿ ವಿಡಿಯೋವೊಂದು ಸುಳಿವು ನೀಡಿತ್ತು. ಅದರಲ್ಲಿ ಬೈಕ್ ಸವಾರ, ಕಾರನ್ನು ಅಡ್ಡಗಟ್ಟಿ ಅದರಲ್ಲಿದ್ದ ಯುವತಿಗೆ ಬೆದರಿಕೆಯೊಡ್ಡುತ್ತಾನೆ. ಯುವತಿ, ‘ನೀವು ಯಾರು’ ಎಂದು ಪ್ರಶ್ನಿಸಿದಾಗ, ‘ಹೆಬ್ಬಾಳ ಪೊಲೀಸ್’ ಎಂದು ಆರೋಪಿ ಹೇಳಿದ್ದ. ಐಡಿ ಕಾರ್ಡ್ ತೋರಿಸುವಂತೆ ಯುವತಿ ಕೇಳಿದಾಗ, ‘ನಿನ್ನ ಗಂಡನ ನಂಬರ್ ಕೊಡು’ ಎಂದಿದ್ದ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದರಲ್ಲಿ ಸೆರೆಯಾಗಿದ್ದ ಆರೋಪಿ ಬೈಕ್ ನಂಬರ್ ಆಧರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯುವತಿಗೆ ಬೆದರಿಸಿ ಮೊಬೈಲ್ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಕಸಿದುಕೊಂಡಿರುವ ಅನುಮಾನ ಇದೆ. ಆದರೆ, ನೊಂದ ಯುವತಿ ಇಲ್ಲಿಯವರೆಗೂ ದೂರು ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.