

ಬೆಂಗಳೂರು: ಗಾಂಜಾ ಆರೋಪಿಯನ್ನು ಬಂಧಿಸಲು ಒರಿಸ್ಸಾಗೆ ತೆರಳಿದ್ದ ಜಿಗಣಿ ಠಾಣೆಯ ಪೊಲೀಸ್ ಕ್ರೈಂ ಪೇದೆಯನ್ನೇ ಒರಿಸ್ಸಾ ಪೊಲೀಸರು ಬಂದಿಸಿ ಜೈಲಿಗೆ ಕಳುಹಿಸಿದ ಘಟನೆ ನಡೆದಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿ ಸಂಜಯ್ ರಾವತ್ ಎಂಬಾತನನ್ನು ಬಂಧಿಸಿದ್ದ ಜಿಗಣಿ ಪೊಲೀಸರು ತನಿಖೆಗೆ ಒಳಪಡಿಸಿದ್ದರು. ತನಿಖೆ ವೇಳೆ ಸಂಜಯ್ ರಾವತ್ ಒರಿಸ್ಸಾದಿಂದ ಗಾಂಜಾ ತಂದಿರುವುದಾಗಿ ಬಾಯಿಬಿಟ್ಟಿದ್ದ. ಒರಿಸ್ಸಾದಿಂದ ಗಾಂಜಾ ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳ ಹೆಸರನ್ನು ಬಾಯಿಬಿಟ್ಟಿದ್ದ. ಆರೋಪಿ ಸಂಜಯ್ ರಾವತ್ ನೀಡಿದ್ದ ಮಾಹಿತಿ ಮೇರೆಗೆ ಜಿಗಣಿ ಪೊಲೀಸ್ ಠಾಣೆಯ ಆರು ಜನ ಸಿಬ್ಬಂದಿ ಹಾಗೂ ಒರಿಸ್ಸಾ ಭಾಷೆ ತಿಳಿದಿದ್ದ ಜಿಗಣಿಯ ಯುವಕ ಹಾಗೂ ಆರೋಪಿ ಸಂಜಯ್ ರಾವತ್ ಪರಿಚಯಸ್ತ ಬೆಂಗಳೂರಿನ ಶ್ಯಾಮ್ ಜತೆ ಹೊರಟಿತ್ತು.
ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ಆದೇಶದ ಮೇರೆಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಗಳಿಗೆ ಪರಿಚಯಸ್ಥನಾಗಿದ್ದ ಬೆಂಗಳೂರಿನ ಶ್ಯಾಮ್ ಜತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲು ಒರಿಸ್ಸಾಗೆ ತೆರಳಿದ್ದರು.
ಒರಿಸ್ಸಾದಲ್ಲಿನ ಕಾಡಂಚಿನಲ್ಲಿ ಗಾಂಜಾ ಮಾರಾಟ ಮಾಡುವುದು ಮಾಹಿತಿ ಕಲೆ ಹಾಕಲಾಗಿತ್ತು. ಸ್ಥಳಕ್ಕೆ ಜಿಗಣಿ ಠಾಣೆ ಕ್ರೈಂ ಪೇದೆ ಆನಂದ್, ಶ್ಯಾಮ್ ಹಾಗೂ ಜಿಗಣಿಯ ಯುವಕ ಮಾರು ವೇಷದಲ್ಲಿ ಹೋಗಿದ್ದರು. ಗಾಂಜಾ ಖರೀದಿ ಮಾಡುವವರ ನೆಪದಲ್ಲಿ ಕಾಡಂಚಿಗೆ ತೆರಳಿದ್ದ ಮೂವರು ೧೭ ಕೆ.ಜಿ ಗಾಂಜಾ ವಶಕ್ಕೆ ಪಡೆದು ಕಾಡಿನಿಂದ ಆರೋಪಿಗಳನ್ನು ಬಂಧಿಸಿ ಕರೆ ತರುತ್ತಿದ್ದ ಸಂದರ್ಭದಲ್ಲಿ ಒರಿಸ್ಸಾ ಪೊಲೀಸರು ಕ್ರೈಂ ಪೊಲೀಸ್ ಪೇದೆ ಆನಂದ್ ಸೇರಿ ಮೂವರನ್ನು ಬಂಧಿಸಿದ್ದಾರೆ.
ಪೊಲೀಸರು ಬಂಧನ ಮಾಡುತ್ತಿದ್ದಂತೆ ಗಾಂಜಾ ಸರಬರಾಜು ಮಾಡಲು ಬಂದಿದ್ದ ಒಬ್ಬ ಪರಾರಿ ಆಗಿದ್ದು, ಗಾಂಜಾ ಜತೆಗೆ ಪೊಲೀಸ್ ಪೇದೆ ಆನಂದ್ ಹಾಗೂ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ ಒರಿಸ್ಸಾ ಪೋಲೀಸರು ಪೊಲೀಸ್ ಠಾಣೆಗೆ ಕರೆದೊಯ್ದು ದೂರು ದಾಖಲಿಸಿ ಆನಂದ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಇನ್ನೊಬ್ಬನನ್ನು ಜೈಲಿಗೆ ಕಳುಹಿಸಿದ್ದಾರೆ.
ಒರಿಸ್ಸಾ ಪೊಲೀಸರು ಬಂಧನ ಮಾಡಿದಾಗ ಆನಂದ್ ತಾನು ಪೋಲಿಸ್ ಎಂದು ಹೇಳಿಕೊಂಡು ದಾಖಲೆ ತೋರಿಸಿದರು ಬಿಡದ ಬಂಧಿಸಿ ಸ್ಥಳೀಯ ಪೊಲೀಸರಿಗೆ ಸರಿಯಾಗಿ ಮಾಹಿತಿ ನೀಡಲಿಲ್ಲ ಎಂಬ ಆರೋಪದ ಮೇರೆಗೆ ಆನಂದ್ ಅವರ ಬಂಧನ ಮಾಡಿ ಜೈಲಿಗೆ ಕಳುಹಿಸಿದ್ದಾರೆ.
ಘಟನೆಯ ಬಳಿಕ ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡೆ ಅಲ್ಲಿನ ಪೊಲೀಸರ ಜತೆಗೆ ಮಾತುಕತೆ ನಡೆಸಿದರೂ ಪ್ರಯೋಜನವಾಗದ ಹಿನ್ನೆಲೆ ಈಗಾಗಲೇ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್.ಪಿ ಪುರುಷೋತ್ತಮ್ ಹಾಗೂ ಜಿಗಣಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ಒರಿಸ್ಸಾಗಿ ತೆರಳಿದ್ದು, ಬೇಲ್ ಮೂಲಕ ಆನಂದ್ ಕರೆ ತರಲು ಮುಂದಾಗಿದ್ದಾರೆ.
ಸ್ಥಳೀಯ ಪೊಲೀಸರು ಮಾಹಿತಿ ನೀಡಿಲ್ಲ ಎನ್ನುವ ಕಾರಣಕ್ಕೆ ಆನಂದ್ ಬಂಧನ ಮಾಡಿದ್ದಾರೆ. ಈಗಾಗಲೇ ಬೆಂಗಳೂರು ಗ್ರಾಮಾಂತರ ಅಡಿಷನಲ್ ಎಸ್ಪಿ ಹಾಗೂ ಜಿಗಣಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅವರನ್ನು ಒರಿಸಾಗಿ ಕಳುಹಿಸಿಕೊಡಲಾಗಿದ್ದು, ಬೇಲ್ ಮೂಲಕ ಆನಂದ್ ಕರೆ ತರಲು ಸಿದ್ಧತೆ ಮಾಡಲಾಗಿದೆ.
-ಮಲ್ಲಿಕಾರ್ಜುನ್ ಬಾಲದಂಡಿ, ಬೆಂಗಳೂರು ಗ್ರಾಮಾಂತರ ಎಸ್.ಪಿ