ಶಿವಕುಮಾರಸ್ವಾಮಿಗಳ ಪುತ್ಥಳಿ ವಿರೂಪಗೊಳಿಸಿದವನ ಸೆರೆ

Arrest Kaidhi
Published on

ಬೆಂಗಳೂರು : ಲಿಂಗೈಕ್ಯರಾಗಿರುವ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮಿಗಳ ಪುತ್ಥಳಿಯನ್ನು ವಿರೂಪಗೊಳಿಸಿ ಫುಡ್‌ಡೆಲಿವರಿ ಬಾಯ್‌ನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಬ್ಯಾಡರಹಳ್ಳಿ ಸಮೀಪದ ಭರತನಗರ ನಿವಾಸಿ ಶಿವಕೃಷ್ಣ (೩೪) ಬಂಧಿತ. ಆರೋಪಿ ನ.೩೦ರಂದು ತಡರಾತ್ರಿ ಗಿರಿನಗರದ ವೀರಭದ್ರನಗರದ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಲಾಗಿದ್ದ ಶಿವಕುಮಾರಸ್ವಾಮೀಜಿಗಳ ಪುತ್ಥಳಿಯನ್ನು ವಿರೂಪಗೊಳಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐದು ವರ್ಷಗಳ ಹಿಂದೆ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆ ವೀರಭದ್ರನಗರದ ಬಸ್ ನಿಲ್ದಾಣದಲ್ಲಿ ಶಿವಕುಮಾರ ಸ್ವಾಮಿಗಳ ಪುತ್ಥಳಿ ನಿರ್ಮಿಸಿತ್ತು. ಈ ಸಂಘಟನೆಯೇ ಪುತ್ಥಳಿ ನಿರ್ವಹಿಸುತ್ತಿದೆ. ಆದರೆ, ನ.೩೦ ರ ತಡರಾತ್ರಿ ದ್ವಿಚಕ್ರವಾಹನದಲ್ಲಿ ಬಂದ ಆರೋಪಿಯೊಬ್ಬ ಪುತ್ಥಳಿಯನ್ನು ವಿರೂಪಗೊಳಿಸಿದ್ದಾನೆ. ಈ ಸಂಬಂಧ ಸಂಘಟನೆ ಅಧ್ಯಕ್ಷ ಪರಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೈಸ್ತ ಧರ್ಮ ಪ್ರಭಾವಕೊಳ್ಳಗಾಗಿ ಕೃತ್ಯ:

ಆರೋಪಿ ಅವಿವಾಹಿತನಾಗಿದ್ದು, ಅನಾರೋಗ್ಯದಿಂದಾಗಿ ಮಾನಸಿಕ ಖಿನ್ನತೆಗೊಳಲಾಗಿದ್ದ. ಮೂರು ವರ್ಷಗಳ ಹಿಂದೆ ಕ್ರೈಸ್ತ ಧರ್ಮದ ಪ್ರಭಾವಕ್ಕೊಳಗಾಗಿ ಅಂದಿನಿಂದ ಕ್ರಿಶ್ಚಿಯನ್ ಧರ್ಮದ ಪಾಲನೆ ಮಾಡುತ್ತಿದ್ದ. ಪರಿಣಾಮ ಹಿಂದೂ ಧರ್ಮದ ಸಂತರು, ಸನ್ಯಾಸಿಗಳ ವಿರುದ್ಧ ಹಗೆತನ ಸಾಧಿಸುತ್ತಿದ್ದ. ಮತ್ತೊಂದೆಡೆ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ, ಕೆಲ ದಿನಗಳ ಹಿಂದೆ ಫುಡ್ ಡೆಲಿವರಿ ಮಾಡಲು ಗಿರಿನಗರದ ವೀರಭದ್ರನಗರಕ್ಕೆ ಹೋಗಿದ್ದಾಗ ಶ್ರೀಗಳ ಪುತ್ಥಳಿ ಗಮನಿಸಿದ್ದ. ನ.೩೦ರಂದು ತಡರಾತ್ರಿ ಅದೇ ಜಾಗಕ್ಕೆ ಬಂದು ಸುತ್ತಿಗೆಯಿಂದ ಶ್ರೀಗಳ ಪುತ್ಥಳಿ ವಿರೂಪಗೊಳಿಸಿ ಪರಾರಿಯಾಗಿದ್ದ. ಕೃತ್ಯವೆಸಗಿದ ಬಳಿಕ ತಮ್ಮ ಮನೆಯ ಏರಿಯಾದಲ್ಲಿ ಹಿಂದೂ ಧಾರ್ಮಿಕ ಕಾರ್ಯಕ್ರಮ ಇರುವ ಬಗ್ಗೆ ಹಾಕಲಾಗಿದ್ದ ಬ್ಯಾನರ್‌ಗೂ ಕಲ್ಲು ಎಸೆದು ಹರಿದು ಹಾಕಿದ್ದ. ಕ್ರೈಸ್ತ ಧರ್ಮದ ಪ್ರಚಾರ ಮಾಡುತ್ತಿದ್ದ ಆರೋಪಿ ಭಿತ್ತಿಪತ್ರ ಹಂಚುತ್ತಿದ್ದ. ಭಿತ್ತಿಪತ್ರದಲ್ಲಿ ಕ್ಯೂ ಆರ್ ಕೋಡ್ ಸ್ಕಾೃನ್ ಮಾಡಿದರೆ ನೇರವಾಗಿ ಬೈಬಲ್ ಸಿಗುವಂತೆ ಲಿಂಕ್ ಕೊಟ್ಟಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net