ಬಾಲಕಿ ತಂದೆಯನ್ನು ಕೊಂದಿದ್ದ ಆರೋಪಿಯ ಬಂಧನ

Crime ( Arrest)
Published on


ಬೆಂಗಳೂರು: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನ ಮನೆಗೆ ಹೋಗಿ ಬುದ್ದಿವಾದ ಹೇಳಿದ ಬಾಲಕಿಯ ತಂದೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ನಂಜಪ್ಪ ವೃತ್ತದ ನಿವಾಸಿ ಜಾಹಿದ್(20) ಬಂಧಿತ. ಅನ್ವರ್ (42) ಕೊಲೆಯಾದವರು.

ಅನ್ವರ್ ಗೂಡ್ಸ್ ಆಟೋ ಚಾಲಕನಾಗಿದ್ದು, ನಂಜಪ್ಪ ವೃತ್ತ ಸಮೀಪದ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದರು. ಅನ್ವರ್‌ಗೆ 15 ವರ್ಷದ ಪುತ್ರಿಯಿದ್ದು, ಆಕೆ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಎಲೆಕ್ಟ್ರಿಕಲ್ ಗೋಡೌನ್‌ನಲ್ಲಿ ಕೆಲಸ ಮಾಡುವ ಆರೋಪಿ ಜಾಹಿದ್, ಅನ್ವರ್ ಅವರ ಪುತ್ರಿಯ ಹಿಂದೆ ಬಿದ್ದಿದ್ದು, ನಿತ್ಯ ಆಕೆಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಬಾಲಕಿ, ಈ ವಿಚಾರವನ್ನು ತಂದೆಗೆ ತಿಳಿಸಿದ್ದಳು. ಕಳೆದ ಮೂರು ತಿಂಗಳ ಹಿಂದೆಯೇ ಜಾಹಿದ್‌ಗೆ ಅನ್ವರ್ ಬುದ್ದಿವಾದ ಹೇಳಿದ್ದರು. ಆದರೂ ಆರೋಪಿ, ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಮನೆಯಲ್ಲಿ ಕೃತ್ಯ:
ಶನಿವಾರಕೂಡ ಜಾಹಿದ್, ಬಾಲಕಿಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಪೀಡಿಸಿದ್ದಾನೆ. ಅದರಿಂದ ಆಕ್ರೋಶಗೊಂಡ ಅನ್ವರ್, ಶನಿವಾರ ಸಂಜೆ ಆತನ ಮನೆಗೆ ತೆರಳಿ ಜಾಹಿದ್ ಪಾಲಕರಿಗೆ ತಿಳಿಸಿ, ಮತ್ತೊಮ್ಮೆ ಪುತ್ರಿಗೆ ತೊಂದರೆ ಕೊಡದಂತೆ ಪುತ್ರನಿಗೆ ಎಚ್ಚರಿಕೆ ನೀಡುವಂತೆ ಮನವಿ ಮಾಡಿದ್ದಾರೆ. ಬಾಲಕಿ ತಂದೆ, ಆರೋಪಿ ಮನೆಯವರ ಜತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜಾಹಿದ್ ಸಹ ಸ್ಥಳದಲ್ಲಿದ್ದ ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಜಾಹಿದ್ ಚಾಕುವಿನಿಂದ ಅನ್ವರ್‌ಗೆ ಕುತ್ತಿಗೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅನ್ವರ್ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಕ್ಸೊ ಚಿಂತನೆ:
ಕೊಲೆ ಆರೋಪದಡಿ ಜಾಹಿದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಯು ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಫೋಕ್ಸೊ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net