ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯ ಸೆರೆ

arrested
Published on

ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಕರ್ತವ್ಯ ನಿರತ ಬಿಎಂಟಿಸಿ ಬಸ್ ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ನಾಗರಬಾವಿ ನಿವಾಸಿ ಹೇಮಂತ್ ಬಂಧಿತ. ಬಸ್ ನಿರ್ವಾಹಕ ಸಂಗಪ್ಪ ಚಿತ್ತಲಗಿ ಹಲ್ಲೆಗೊಳಾಗಿದ್ದು, ಈ ಸಂಬಂಧ ಚಾಲಕ ಬಸವರಾಜ್ ನೀಡಿದ ದೂರಿನ ಮೇರೆಗೆ ಹೇಮಂತ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೇಮಂತ್ ಬಿಕಾಂ ಪದವೀಧರನಾಗಿದ್ದು, ಮಾರತ್‌ಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಎಲೆಕ್ಟ್ರಾನಿಕ್ ಸಿಟಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಗಪ್ಪ ಅ.೧೮ರ ಟಿನ್ ಫ್ಯಾಕ್ಟರಿ ಬಳಿ ಬಸ್ ನಿಲ್ಲಿಸಿ ಚಾಲಕನೊಂದಿಗೆ ಬಸ್‌ನಲ್ಲಿ ಊಟ ಮಾಡುತ್ತಿರುವ ಈ ವೇಳೆ ಏಕಾಏಕಿ ಬಸ್ ಹತ್ತಿದ್ದ ಆರೋಪಿ ಕಲ್ಲಿನಿಂದ ಕಂಡಕ್ಟರ್ ತಲೆಗೆ ಹೊಡೆದು ಪರಾರಿಯಾಗಿದ್ದಾನೆ. ಕೂಡಲೇ ಆತನನ್ನು ಹಿಂಬಾಲಿಸಿದ್ದ ನಿರ್ವಾಹಕ ಮತ್ತು ಚಾಲಕ ಹಿಡಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆ ನಡೆಸಿದಾಗ ಕೆಲ ದಿನಗಳ ಹಿಂದೆ ಪಾಸ್ ತೋರಿಸುವ ವಿಚಾರಕ್ಕಾಗಿ ಕಂಡಕ್ಟರ್‌ನೊಂದಿಗೆ ಮಾತಿನ ಚಕಮಕಿ ನಡೆದಿದ್ದರಿಂದ ಕೋಪಗೊಂಡು ಹಲ್ಲೆ ಮಾಡಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆರೋಪಿ ತಂದೆಯೂ ಕೂಡ ಬಿಎಂಟಿಸಿ ನಿವೃತ್ತ ಬಸ್ ಕಂಡಕ್ಟರ್ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net