ಸಿದ್ದಾಪುರ: ಸ್ಥಳಿಯ ವ್ಯಾಪಾರಿಯೊಬ್ಬರು ಕಣದಲ್ಲಿ ದಾಸ್ತಾನು ಮಾಡಿಟ್ಟ ಕಾಫಿ ಬೀಜವನ್ನು ಕಳವು ಮಾಡಿರುವ ಪ್ರಕಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಸಿದ್ದಾಪುರ ಪೋಲಿಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ತಿತಿಮತಿ ನಿವಾಸಿಗಳಾದ ಫ್ರಾನ್ಸಿಸ್, ಶಫೀಕ್, ಅನೀಸ ಹಾಗೂ ಯಾಸಿನ್ ಬಂಧಿತರು. ಇವರು ಇತ್ತೀಚೆಗೆ ಸಿದ್ದಾಪುರ ಠಾಣಾ ವ್ಯಾಪ್ತಿಯ ಬಾಡಗ ಬಾಣಂಗಾಲದ ಹಸಿಕಾಫಿ ವ್ಯಾಪಾರಿ ಸಜಿ ಥೋಮಸ್ ಕಣದಲ್ಲಿ ಒಣಗಿಸಲೆಂದು ದಾಸ್ತಾನು ಮಾಡಿದ್ದ ಸುಮಾರು 80 ಸಾವಿರ ಮೌಲ್ಯದ 12 ಚೀಲ ಹಸಿಕಾಫಿಯನ್ನು ಕಣದಿಂದ ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಜ.17ರಂದು ಸಜಿ ಥೋಮಸ್ ಅವರು ದೂರು ನೀಡಿದ್ದು, ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ಸಿದ್ದಾಪುರ ಪೋಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ ಕಾಫಿ ಮೂಟೆಗಳು ಸೇರಿದಂತೆ ಪಿಕಪ್ ಜೀಪ್, ಕಾರು ಮತ್ತು ಬೈಕ್‌ಅನ್ನು ವಶಪಡಿಸಿಕೊಳ್ಳಲಾಗಿದೆ.