

ಶ್ರೀನಗರ: ಸಾಮಾಜಿಕ ಜಾಲತಾಣಗಳಲ್ಲಿ ವಿವಾದಾತ್ಮಕ ಮತ್ತು ದೇಶದ್ರೋಹದ ಹೇಳಿಕೆ ನೀಡಿರುವ ಆರೋಪದಡಿಯಲ್ಲಿ ಜಮ್ಮು- ಕಾಶ್ಮೀರದ ಪತ್ರಕರ್ತನೊಬ್ಬನನ್ನು ಬಂಧಿಸಲಾಗಿದೆ. 48 ಗಂಟೆಗಳಲ್ಲಿ ಮೂರು ಪತ್ರಕರ್ತರನ್ನು ವಿವಾದಾತ್ಮಕ ಹೇಳಿಕೆಯ ಆರೋಪದಡಿ ಬಂಧಿಸಲಾಗಿದೆ.
ಹಿರಿಯ ಪತ್ರಕರ್ತ ಗವ್ಹಾರ್ ಗೀಲಾನಿ ಸಾಮಾಜಿಕ ಜಾಲತಾಣದಲ್ಲಿ ಸಮಗ್ರತೆ, ಸಾರ್ವಭೌಮತ್ವ ಮತ್ತು ಭಾರತದ ಭದ್ರತೆಗೆ ಧಕ್ಕೆ ತರುವಂತಹ ಪೋಸ್ಟ್ಗಳನ್ನು ಹಾಕಿದ್ದರು. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ವೈಭವೀಕರಿಸುವುದು, ದೇಶದ ಅವಹೇಳನ, ಸಾರ್ವಜನಿಕರ ಮನಸ್ಸಿನಲ್ಲಿ ಭಯ ಹುಟ್ಟಿಸುವಂತಹ ಪೋಸ್ಟ್ಗಳನ್ನು ಅವರು ಹಾಕಿರುವುದಿರಂದಾಗಿ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಎಫ್ಐಆರ್ ಹಾಕಲಾಗಿದೆ.
ಶ್ರೀನಗರದ ಸೈಬರ್ ಪೊಲೀಸ್ ಯುನಿಟ್ನ ಮುಖ್ಯಸ್ಥರಾಗಿರುವ ತಾರಿಫ್ ಅಶ್ರಫ್ 2013ರಲ್ಲಿ ನರೇಂದ್ರ ಮೋದಿಯನ್ನು ಹಿಂಸಾಸಕ್ತ ಎಂದು ಟ್ವೀಟ್ ಮಾಡಿದ್ದು, ಪತ್ರಕರ್ತರ ಬಂಧನವಾಗುತ್ತಿದ್ದಂತೆ ಸಾರ್ವಜನಿಕರು ಈ ವಿಚಾರವನ್ನು ಹೊರತೆಗೆದಿದ್ದಾರೆ. ಸದ್ಯ ತಾರಿಫ್ ಅವರ ಟ್ವೀಟ್ನ್ನು ಡಿಲೀಟ್ ಮಾಡಲಾಗಿದೆಯಾದರೂ ಅದರ ಸ್ಕ್ರೀನ್ಶಾಟ್ಗಳನ್ನು ಜನರು ಪೋಸ್ಟ್ ಮಾಡುತ್ತಿದ್ದು ಪತ್ರಕರ್ತರಂತೆ ಪೊಲೀಸರನ್ನು ಬಂಧಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.