

ಬೆಂಗಳೂರು: ‘ಜೈ ಶ್ರೀರಾಮ್’ ಕೂಗಿದ ಯುವಕರ ಮೇಲೆ ಹಲ್ಲೆ ಪ್ರಕರಣ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಮತ್ತೊಂದೆಡೆ, ಹಲ್ಲೆ ಖಂಡಿಸಿ ಬಿಜೆಪಿ ಮುಖಂಡರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮೀಪ್ರಸಾದ್‌ಗೆ ಮನವಿ ಪತ್ರ ಸಲ್ಲಿಸಿದರು.
ಎಂ.ಎಸ್.ಪಾಳ್ಯದ ರ್ಮಾನ್, ಸಮೀರ್ ಹಾಗೂ ಇಬ್ಬರು ಅಪ್ರಾಪ್ತರು ಬಂಧಿತರು. ಬುಧವಾರ ಮಧ್ಯಾಹ್ನ 3.20ರಲ್ಲಿ ಸಹಕಾರನಗರದ ಡಿ. ಪವನ್ ಕುಮಾರ್, ಬಿನಾಯಕ್ ಮತ್ತು ರಾಹುಲ್ ಮೇಲೆ ಹಲ್ಲೆ ನಡೆಸಿದ್ದರು. ದೂರು ದಾಖಲಾದ ಕೆಲವೇ ತಾಸಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಪೈಕಿ ಇಬ್ಬರು ಮದ್ಯ ಸೇವನೆ ಮಾಡಿದ್ದರು. ಮಾದಕ ದ್ರವ್ಯ ಸೇವನೆ ಕುರಿತು ಸಹ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬರಬೇಕಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಬಿಜೆಪಿ ಪ್ರತಿಭಟನೆ
ಜೈಶ್ರೀರಾಮ್ ಕೂಗಿದವರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಗುರುವಾರ ಬಿಜೆಪಿ ಮುಖಂಡರು, ವಿದ್ಯಾರಣ್ಯಪುರ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ರ‌್ಯಾಲಿ ನಡೆಸಿದರು. ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಎ. ರವಿ, ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಬರಲು ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ನಮ್ಮ ಹಬ್ಬವನ್ನು ಆಚರಣೆ ಮತ್ತು ಕೇಸರಿ ಬಾವುಟ ಹಿಡಿಯೋಕೆ ಹೆದರುವ ಪರಿಸ್ಥಿತಿ ಎದುರಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕೆಂದು ಪೊಲೀಸರಿಗೆ ಒತ್ತಾಯಿಸಿದರು.