ಐವರು ಶಂಕಿತರ ಬಂಧನ ಪ್ರಕರಣ: ದೂರು ದಾಖಲಿಸಿದ ಎನ್‌ಐಎ, ಸದ್ಯದಲ್ಲಿಯೇ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ

NIA
Published on

ಬೆಂಗಳೂರು : ನಗರದಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಸಿಸಿಬಿಯಿಂದ ಪ್ರಕರಣ ವರ್ಗಾವಣೆಗೊಂಡ ಬೆನ್ನಲ್ಲೇ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯದಲ್ಲಿಯೇ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.


ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧತೆೆ ನಡೆಸಿದ್ದ ಆರೋಪದಲ್ಲಿ ಆರ್.ಟಿ.ನಗರದ ಸುಲ್ತಾನ್‌ಪಾಳ್ಯ ನಿವಾಸಿ ಸೈಯದ್ ಸುಹೈಲ್ ಖಾನ್(೨೪), ಕೊಡಿಗೇಹಳ್ಳಿ ನಿವಾಸಿ ಮೊಹಮ್ಮದ್ ಉಮರ್(೨೯), ಭದ್ರಪ್ಪ ಲೇಔಟ್ ನಿವಾಸಿ ಜಾಹೀದ್ ತಬ್ರೇಜ್(೨೫), ಸೈಯದ್ ಮುದಾಸಿರ್ ಪಾಷಾ(೨೮), ಮೊಹಮ್ಮದ್ ಫೈಸಲ್(೩೦) ಹಾಗೂ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಕಿಂಗ್‌ಪಿನ್ ಆರ್.ಟಿ.ನಗರ ನಿವಾಸಿ ಜುನೇದ್ ಅಹಮ್ಮದ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


ಬಂಧಿತರ ಪೈಕಿ ಜಾಹೀದ್ ತಬ್ರೇಜ್ ಮನೆಯ ಅಲ್ಮೆರಾ ಲಾಕರ್‌ನಲ್ಲಿ ನಾಲ್ಕು ಜೀವಂತ ಹ್ಯಾಂಡ್ ಗ್ರೇನೈಡ್‌ಗಳು ಪತ್ತೆಯಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಅರಬ್ ದೇಶದಲ್ಲಿ ತಲೆಮರೆಸಿಕೊಂಡಿರುವ ಜುನೇದ್ ಅಹಮ್ಮದ್ (೨೯) ಅಪರಿಚಿತ ವ್ಯಕ್ತಿಯೊಬ್ಬನಿಂದ ಡೆಲಿವರಿ ಮೂಲಕ ೪ ಜೀವಂತ ಹ್ಯಾಂಡ್ ಗ್ರೇನೈಡ್ ಅನ್ನು ಕೊಡಿಗೇಹಳ್ಳಿಯ ಭದ್ರಪ್ಪಲೇಔಟ್ ನಿವಾಸಿ ಜಾಹಿದ್ ತಬ್ರೇಜ್ ಮನೆಗೆ ಗ್ರೇನೈಡ್ ತಲುಪಿಸಿದ್ದ. ಜುನೇದ್ ವಿದೇಶದಲ್ಲಿದ್ದುಕೊಂಡು ಫೋನ್ ಕರೆಯ ಮೂಲಕ ಕೊಟ್ಟ ಸೂಚನೆಯಂತೆ ಆರೋಪಿ ಜಾಹಿದ್ ತಬ್ರೇಜ್ ಅಪರಿಚಿತನಿಂದ ೪ ಜೀವಂತ ಹ್ಯಾಂಡ್ ಗ್ರೇನೈಡ್‌ಗಳಿರುವ ಪಾರ್ಸೆಲ್ ಅನ್ನು ಸ್ವೀಕರಿಸಿದ್ದ. ಬಳಿಕ ಮನೆಯಲ್ಲಿ ತಾನು ಹೊಂದಿದ್ದ ಪ್ರತ್ಯೇಕ ಕೊಠಡಿಯ ಅಲ್ಮೆರಾದ ಲಾಕರ್‌ನಲ್ಲಿ ಬಚ್ಚಿಟ್ಟಿದ್ದ. ಈತನ ಮನೆ ಮೇಲೆ ಕೇಂದ್ರ ಅಪರಾಧವಿಭಾಗ(ಸಿಸಿಬಿ) ಪೊಲೀಸರು ದಾಳಿ ನಡೆಸಿ ಶೋಧಿಸಿದಾಗ ಜೀವಂತ ಗ್ರೇನೈಡ್‌ಗಳು ಪತ್ತೆಯಾಗಿತ್ತು.
ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯ ಮೇರೆಗೆ ಸಿಸಿಬಿ ಅಧಿಕಾರಿಗಳು ಜುಲೈ ೧೮ರಂದು ಐವರು ಶಂಕಿತರನ್ನು ಬಂಧಿಸಿತ್ತು. ಜುಲೈ ೨೦ ರಂದು ಜಾಹೀದ್ ತಬ್ರೇಜ್ ಮನೆ ಮೇಲೆ ದಾಳಿ ನಡೆಸಿದಾಗ ಜೀವಂತ ಗ್ರೇನೈಡ್‌ಗಳು ಪತ್ತೆಯಾಗಿತ್ತು.

ನಾಸೀರ್ ವಿರುದ್ಧವೂ ದೂರು ದಾಖಲು:
ಪ್ರಕರಣದ ಕಿಂಗ್‌ಪಿನ್ ಆಗಿರುವ ಕೇರಳ ಮೂಲದ ಟಿ.ನಾಸೀರ್ ವಿರುದ್ಧವೂ ಎನ್‌ಐಎ ಕೇಸ್ ದಾಖಲಿಸಿಕೊಂಡಿದೆ. ಬೆಂಗಳೂರಿನಲ್ಲಿ ೨೦೦೮ ರಲ್ಲಿ ಸರಣಿ ಸ್ಫೋಟದ ಪ್ರಮುಖ ಸೂತ್ರದಾರನಾಗಿರುವ ನಾಸೀರ್, ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಅಹಮ್ಮದ್‌ಗೆ ಎಲ್‌ಇಟಿ ಸಂಘಟನೆ ಸೇರಲು ಪ್ರಚೋದಿಸಿ, ಅಕ್ರಮವಾಗಿ ಹಣಕಾಸಿನ ನೆರವು ನೀಡಿದ್ದ. ಈತ ಜೈಲಿನಿಂದ ಬಿಡುಗಡೆಯಾದ ಬಳಿಕ ತನ್ನ ಇತರೆ ಸಹಚರರ ಜತೆ ಸೇರಿಕೊಂಡು ವಿಧ್ವಂಸಕ ಕೃತ್ಯ ಎಸಲು ಸಿದ್ಧತೆ ನಡೆಸಿದ್ದು, ಗ್ರೇನೈಡ್‌ಗಳನ್ನು ತರಿಸಿದ್ದ. ಆ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಶಂಕಿತ ಉಗ್ರ ನಾಸೀರ್ ಜೈಲಿನಲ್ಲಿದ್ದುಕೊಂಡೆ ಈ ಐವರು ಶಂಕಿತ ಉಗ್ರರ ಬ್ರೈನ್ ವಾಶ್ ಮಾಡಿದ್ದನು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net