ಮಾರಕಾಸ್ತ್ರ ತೋರಿಸಿ ಸುಲಿಗೆ ಮಾಡುತ್ತಿದ್ದ ಐವರ ಬಂಧನ : ಸಿಗರೇಟ್ ಸರಬರಾಜು ಮಾಡುತ್ತಿದ್ದವರ ಸುಲಿಗೆ

arrested
Published on

ಬೆಂಗಳೂರು: ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುತ್ತಿದ್ದ ಸೇಲ್ಸ್‌ಮ್ಯಾನ್‌ಗಳಿಗೆ ಮಾರಕಾಸ ತೋರಿಸಿ ದೋಚುತ್ತಿದ್ದ ಗ್ಯಾಂಗ್‌ನ ಐವರು ಸದಸ್ಯರನ್ನು ಬಂಧಿಸಿರುವ ಯಲಹಂಕ ಠಾಣಾ ಪೊಲೀಸರು ೨ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸೈಯದ್ ಅಕ್ಮಲ್, ವಸೀಂ, ಅಲ್ಲಾ ಬಕಾಸ್, ಅಜರ್ ಉಲ್ಲಾ ಶರೀಪ್ ಮತ್ತು ಅಲಿಖಾನ್ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಸಮೀರ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಶೋಧ ನಡೆಸಲಾಗಿದೆ.
ಆರೋಪಿಗಳು ನ.೩೦ ರಂದು ಯಲಹಂಕದ ಕೊಂಡಪ್ಪ ಲೇಔಟ್‌ನಲ್ಲಿ ಸ್ಕೂಟರ್‌ನಲ್ಲಿ ಅಂಗಡಿಯೊಂದಕ್ಕೆ ಸಿಗರೇಟ್ ಸರಬರಾಜು ಮಾಡುತ್ತಿದ್ದ ಸೇಲ್ಸ್ ಮ್ಯಾನ್‌ನನ್ನು ಅಡ್ಡಗಟ್ಟಿ ಮಾರಕಾಸ ತೋರಿಸಿ, ಹೆದರಿಸಿ ಸಿಗರೇಟ್ ಇದ್ದ ಬ್ಯಾಗ್, ಸ್ಕೂಟರ್ ಮತ್ತು ಸುಮಾರು ೬೬ ಸಾವಿರ ರೂ.ನಗದು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಬೇಕಾದಾಗ ಸುಲಿಗೆಗೆ ಸ್ಕೆಚ್:
ಪ್ರಮುಖ ಆರೋಪಿ ಸಮೀರ್, ತನಗೆ ಹಣ ಬೇಕಾದಾಗ ಅಂಗಡಿಗಳಿಗೆ ಸಿಗರೇಟ್ ಸರಬರಾಜು ಮಾಡುವ ಸೇಲ್ಸ್ಮ್ಯಾನ್‌ಗಳನ್ನು ಗುರುತಿಸಿಕೊಂಡು ಉಳಿದ ಆರೋಪಿಗಳಿಗೆ ಮಾರಕಾಸ ಕೊಟ್ಟು ಸುಲಿಗೆ ಮಾಡಲು ಹೇಳುತ್ತಿದ್ದ ಕೊಡುತ್ತಿದ್ದ. ಈತನ ಸೂಚನೆಯ ಮೇರೆಗೆ ಮಾರಕಾಸ್ತ್ರಗಳ ಸಮೇತ ಹೋಗುತ್ತಿದ್ದ ಆರೋಪಿಗಳು, ಸಿಗರೇಟು ಅಂಗಡಿ ಸೇರಿ ಮತ್ತಿತರ ಅಂಗಡಿಗಳಲ್ಲಿ ಇದ್ದ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಬಳಿಕ ಆ ವಸ್ತುಗಳನ್ನು ಸಮೀರ್‌ಗೆ ನೀಡುತ್ತಿದ್ದರು ಅದನ್ನು ವಿಲೇವಾರಿ ಮಾಡುತ್ತಿದ್ದ ಸಮೀರ್, ಉಳಿದ ಆರೋಪಿಗಳಿಗೆ ಕಮೀಷನ್ ರೂಪದಲ್ಲಿ ಹಣ ನೀಡುತ್ತಿದ್ದ. ಇದೇ ರೀತಿ ಇತ್ತೀಚಿಗೆ ಯಲಹಂಕದ ಕೊಂಡಪ್ಪ ಲೇಔಟ್ ಬಳಿ ಶಾಂತಿ ಪ್ರಸಾದ್ ಎಂಬ ಸೇಲ್ಸ್ಮ್ಯಾನ್‌ನನ್ನು ಬೆದರಿಸಿದ್ದ ಆರೋಪಿಗಳು ಸಿಗರೇಟುಗಳನ್ನು ದೋಚಿದ್ದರು. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸದ್ಯ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ನಾಲ್ಕೈದು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಪಟ್ಟಿ ತೆರೆಯಲು ಪೊಲೀಸರು ಚಿಂತನೆ:
ಬಂಧಿತ ಆರೋಪಿಗಳ ಪೈಕಿ ಅಕ್ಮಲ್ ನಾಲ್ಕು ಕೊಲೆ ಯತ್ನ , ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆರೋಪಿಗಳು ಈ ಹಿಂದೆ ಜೈಲುವಾಸ ಅನುಭವಿಸಿ ಹೊರಬಂದರೂ ಮತ್ತದೇ ಕೃತ್ಯ ಎಸಗುತ್ತಿದ್ದರು. ಆರೋಪಿಗಳ ವಿರುದ್ಧ ರೌಡಿಪಟ್ಟಿ ತೆರೆಯಲು ಪೊಲೀಸರು ಚಿಂತನೆ ಮಾಡುತ್ತಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ ೨ ಲಕ್ಷ ರೂ.ಮೌಲ್ಯದ ಸಿಗರೇಟು, ಕೃತ್ಯಕ್ಕೆ ಬಳಸುತ್ತಿದ್ದ ಸ್ಕೂಟರ್‌ಗಳು, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ಸಮೀರ್ ಪತ್ತೆಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net