ಐವರು ಜೈಷ್ ಉಗ್ರರ ಬಂಧನ

terr jan 16
Published on

ನವದೆಹಲಿ: ಜೈಷ್-ಎ-ಮೊಹಮ್ಮದ್​ನ (ಜೆಇಎಂ) ಐವರು ಶಂಕಿತ ಉಗ್ರರನ್ನು ಜಮ್ಮು- ಕಾಶ್ಮೀರದ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಉಗ್ರರು ಗಣರಾಜ್ಯೋತ್ಸವದ ದಿನ ಶ್ರೀನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಇವರ ಬಂಧನದಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಶ್ರೀನಗರದ ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಇಜಾಜ್ ಅಹ್ಮದ್ ಶೇಖ್, ಉಮರ್ ಹಮೀದ್ ಶೇಖ್, ಇಮ್ತಿಯಾಜ್ ಅಹ್ಮದ್ ಚಿಕ್ಲಾ, ಸಾಹಿಲ್ ಫಾರೂಕ್ ಗೋಜ್ರಿ ಮತ್ತು ನಾಸೀರ್ ಅಹ್ಮದ್ ಮಿರ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಹಜರತ್​ಬಾಲ್ ನಿವಾಸಿಗಳು. ಹಜರತ್​ಬಾಲ್​ನಲ್ಲಿ ಇತ್ತೀಚೆಗೆ ಎರಡು ಗ್ರೆನೇಡ್ ದಾಳಿ ನಡೆದಿದ್ದವು. ಈ ಪ್ರಕರಣದ ತನಿಖೆಯಿಂದಾಗಿ ಐವರನ್ನು ಬಂಧಿಸಲು ಸಾಧ್ಯವಾಯಿತು. ದಾಳಿ ನಡೆಸಿದವರು ಈ ಉಗ್ರರೇ ಆಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರಿಂದ ಗ್ರೆನೇಡ್, ಸಣ್ಣ ಬಂದೂಕುಗಳು, ವಾಕಿಟಾಕಿ, ಆತ್ಮಾಹುತಿ ದಾಳಿಗೆ ಬಳಸುವ ಬಾಂಬ್​ಗಳನ್ನು ಕಟ್ಟಿಕೊಳ್ಳುವಂತಹ ಜಾಕೆಟ್​ಗಳು, ಡಿಟೊನೇಟರ್, ಜಿಲಿಟಿನ್ ಕಡ್ಡಿಗಳು, ನೈಟ್ರಿಕ್ ಆಸಿಡ್ ಬಾಟಲಿಗಳು ಸೇರಿ ದೊಡ್ಡ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಕಪಡಿಸಿಕೊಳ್ಳಲಾಗಿದೆ. ಅವಂತಿಪೋರ್​ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರಿಗೆ ನೆರವು ನೀಡುತ್ತಿದ್ದ ಜಹಂಗೀರ್ ಎಂಬುವನನ್ನು ಬುಧವಾರ ಬಂಧಿಸಲಾಗಿತ್ತು. ಇದೇ ಸಂಘಟನೆಯ ಜಿಲ್ಲಾ ಕಮಾಂಡರ್ ಹರೂನ್ ಅಬ್ಬಾಸ್ ವಾನಿ ಎನ್​ಕೌಂಟರ್​ನಲ್ಲಿ ಹತನಾಗಿದ್ದ.

ಪಾಕ್ ವಿರುದ್ಧ ರಾವತ್ ಕಿಡಿ: ಪ್ರಾಯೋಜಕರು ಇರುವವರೆಗೂ ಭಯೋತ್ಪಾದನೆ ಮುಂದುವರಿಯುತ್ತದೆ. ಅಂಥ ದೇಶಗಳ ವಿರುದ್ಧ ಸಮರ ಸಾರುವುದರಿಂದ ಮಾತ್ರ ಭಯೋತ್ಪಾದನೆಯನ್ನು ನಿಮೂಲನೆ ಮಾಡಬಹುದು ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಘೋಷಿಸಿದ್ದಾರೆ. ಸೆಪ್ಟೆಂಬರ್ 11ರ ಘಟನೆಯ ನಂತರ ಅಮೆರಿಕ ಜಾಗತಿಕ ಭಯೋತ್ಪಾದನೆ ವಿರುದ್ಧ ಸಮರ ಸಾರಿತ್ತು. ನಾವೂ ಅದನ್ನೇ ಮಾಡಬೇಕು ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡು ರಾವತ್ ಹೇಳಿದ್ದಾರೆ. ಕೆಲ ದೇಶಗಳು ಭಯೋತ್ಪಾದಕರನ್ನು ಗುರಾಣಿಯಾಗಿರಿಸಿಕೊಂಡು ಕೆಲಸ ಮಾಡುತ್ತವೆ. ಅವರಿಗೆ ಶಸ್ತ್ರಾಸ್ತ್ರ ಒದಗಿಸುತ್ತವೆ. ಹಣಕಾಸು ನೀಡುತ್ತವೆ. ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ದಾಳಿ ನಡೆದ ನಂತರ ಅಮೆರಿಕ ಮಾಡಿದ ರೀತಿಯಲ್ಲೇ ಕ್ರಮ ಕೈಗೊಂಡರೆ ಭಯೋತ್ಪಾದನೆ ನಿಮೂಲನೆ ಸಾಧ್ಯ. ಭಯೋತ್ಪಾದನೆ ಪ್ರಾಯೋಜಿಸುವ ದೇಶದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ರಾಜತಾಂತ್ರಿಕವಾಗಿಯೂ ಅವನ್ನು ಒಂಟಿಯಾಗಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net