2.46 ಕೋಟಿ ದೋಚಿದ್ದ ಚಾಲಕರ ಸೆರೆ

arrested
Published on

ಬೆಂಗಳೂರು: ಜಮೀನು ಮಾರಾಟದಿಂದ ಬಂದಿದ್ದ 2.46 ಕೋಟಿ ರೂ. ಇದ್ದ ಕಾರುಸಮೇತ ಪರಾರಿಯಾಗಿದ್ದ ಚಾಲಕ ಸೇರಿ ಇಬ್ಬರನ್ನು ಸುಬ್ರಹ್ಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಲ್ಲಸಂದ್ರದ ಕಾರು ಚಾಲಕ ಆರ್.ಎಸ್. ಮಂಜುನಾಥ್ (43) ಮತ್ತು ಕನಕಪುರ ರಸ್ತೆಯ ನಾಗನಾಯಕನಹಳ್ಳಿಯ ಜೆಸಿಬಿ ಚಾಲಕ ಕೃಷ್ಣಕುಮಾರ್ (38) ಬಂಧಿತರು. ಆರೋಪಿಗಳಿಂದ 15 ಲಕ್ಷ ರೂ. ಮೌಲ್ಯದ ಕಾರು, 2.35 ಕೋಟಿ ರೂ. ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ಬನಶಂಕರಿ 2ನೇ ಹಂತದ ನಿವಾಸಿ ಸುಕುಮಾರ್, ಮಾ. 28ರಂದು 4 ಎಕರೆ 18 ಗುಂಟೆ ಜಮೀನು ಮಾರಾಟ ಮಾಡಿದ್ದರು. ಕನಕಪುರ ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮುಗಿಸಿದ್ದು, ಅದರಿಂದ 2.47 ಕೋಟಿ ರೂ. ನಗದು ಬಂದಿತ್ತು. ಪರಿಚಿತ ಚಾಲಕ ಮಂಜುನಾಥ್‌ನ ಜತೆ ಆ್ಯಪ್‌ನಲ್ಲಿ ಇನ್ನೋವಾ ಕಾರು ಬುಕ್ ಮಾಡಿಕೊಂಡು ಮನೆಗೆ ಹೋಗುತ್ತಿದ್ದರು. ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ನಿಲ್ಲಿಸಿ 1 ಲಕ್ಷ ರೂ. ಅನ್ನು ಜಮೆ ಮಾಡಿ ಬರುವಷ್ಟರಲ್ಲಿ ಹಣ ಹಾಗೂ ಕಾರಿಸಮೇತ ಚಾಲಕ ಪರಾರಿಯಾಗಿದ್ದ. ಈ ಬಗ್ಗೆ ಸುಕುಮಾರ್, ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಎಂ.ಎಸ್. ರಾಜು ನೇತೃತ್ವದ ತಂಡ ಆರೋಪಿ ಬಂಧನಕ್ಕೆ ಬಲೆಬೀಸಿತ್ತು.

ತಾಂತ್ರಿಕ ಮಾಹಿತಿ ಕಲೆ ಹಾಕಿದಾಗ ಕಿಮ್ಸ್ ಆಸ್ಪತ್ರೆ ಮುಂಭಾಗ ಕಾರು ಬಿಟ್ಟು ಸ್ವಂತ ಸ್ವ್‌ಟಿ ಕಾರಿಗೆ ಹಣದೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿತ್ತು. ಇದಾದ ಮೇಲೆ ಚಾಲಕನಿಗೆ ಸಾಥ್ ನೀಡಿದ್ದ ಕೃಷ್ಣಕುಮಾರ್‌ನನ್ನು ಕೆ.ಎಂ. ದೊಡ್ಡಿಯ ಭಾರತಿನಗರ ಸರ್ಕಾರಿ ಶಾಲೆ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದ. ಈತ ಕೊಟ್ಟ ಮಾಹಿತಿ ಮೇರೆಗೆ ಮಂಜುನಾಥ್‌ನ್ನು ಬಂಧಿಸಿ 2.35 ಕೋಟಿ ರೂ. ಅನ್ನು ಜಪ್ತಿ ಮಾಡಲಾಗಿದೆ.

ಆರೋಪಿ ಮಂಜುನಾಥ್, ವೃತ್ತಿಪರ ಚಾಲಕನಾಗಿದ್ದ. ದರೋಡೆ, ಅಟ್ರಾಸಿಟಿ ಮತ್ತು ಕಿಡ್ನಾ ್ಯಪ್ ಪ್ರಕರಣದಲ್ಲಿ ಭಾಗಿಯಾಗಿದ್ದ. 10 ವರ್ಷದಿಂದ ಸುಕುಮಾರ್‌ಗೆ ಪರಿಚಯವಿದ್ದು, ತುರ್ತು ಇದ್ದಾಗ ಚಾಲಕನಾಗಿ ಕರೆಯುತ್ತಿದ್ದರು. ಇದೇ ಪರಿಚಯದಲ್ಲಿ ಮಾ. 28ರಂದು ಕರೆಸಿದ್ದರು. ದೊಡ್ಡ ಮೊತ್ತದ ಹಣವನ್ನು ನೋಡಿದ ಮಂಜುನಾಥ್, ಕಪ್ಪು ಹಣ ಇರಬೇಕು. ಕಳ್ಳತನ ಮಾಡಿದರೆ ಪೊಲೀಸರಿಗೆ ದೂರು ಕೊಡುವುದಿಲ್ಲ ಎಂದು ಪ್ಲಾನ್ ಮಾಡಿ ಕೃತ್ಯ ಎಸಗಿದ್ದ ಎಂದು ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net