

ಬೆಂಗಳೂರು: ಆನ್‌ಲೈನ್‌ನಲ್ಲಿ ಬುಕ್ ಮಾಡಿದ ಮೊಬೈಲ್ ಮತ್ತು ಇನ್ನಿತರ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸದೆ ಕಳ್ಳತನ ಮಾಡಿದ್ದ ಡೆಲಿವರಿ ಬಾಯ್‌ಗಳನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.
ಒಡಿಶಾ ಮೂಲದ ಬಾದಲ್ ಬೇಗೂರಿ (28), ಭವಾನಿ ಶಂಕರ್ ಬೇಗೂರಿ (28) ಬಂಧಿತರು. ದೊಡ್ಡನೆಕ್ಕುಂದಿಯಲ್ಲಿ ಇರುವ ಎನ್‌ಸಿಪಿಆರ್ ಇಂಡಸ್ಟ್ರಿಯಲ್ ಪ್ರದೇಶದ ಇನ್‌ಸ್ಟಾಕಾರ್ಟ್ ಪ್ರೈ.ಲಿ.ನಲ್ಲಿ ಡೆಲಿವರಿ ಬಾಯ್ ಕೆಲಸಕ್ಕೆ ಸೇರಿಕೊಂಡಿದ್ದರು. ಗ್ರಾಹಕರು ಬುಕ್ ಮಾಡಿದ ಮೊಬೈಲ್, ಇತರ ವಸ್ತುಗಳನ್ನು ವಿಳಾಸಕ್ಕೆ ಪಾರ್ಸೆಲ್ ತಲುಪಿಸುವಂತೆ ಇವರಿಗೆ ತಿಳಿಸಲಾಗಿತ್ತು.
ಆದರೆ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸದೆ ಒಡಿಶಾಗೆ ಹೋಗಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಒಡಿಶಾಗೆ ಹೋಗಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ 18 ಮೊಬೈಲ್, ಬೆಲೆ ಬಾಳುವ ವಾಚ್, ಇಯರ್ ಫೋನ್, ಇಯರ್ ಬಡ್ಸ್, ಟಿ.ಬಿ ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಸ್ತುಗಳ ಮೌಲ್ಯ 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.