ಕೊಲೆ ಪ್ರಕರಣದ ಆರೋಪಿಯ ಸೆರೆ

arrested
Published on

ಬೆಂಗಳೂರು: ಶ್ರೀನಿವಾಸನಗರ ಬಸ್‌ನಿಲ್ದಾಣದ ಬಳಿ ನಡೆದಿದ್ದ ವಿಜಯ್‌ಕುಮಾರ್ ಎಂಬ ಯುವಕನ ಕೊಲೆ ಪ್ರಕರಣದ ಆರೋಪಿಯನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ವಿಷ್ಣು ಬಂಧಿತ ಆರೋಪಿ.
ಸ್ನೇಹಿತರಾಗಿದ್ದ ವಿಜಯ್ ಮತ್ತು ವಿಷ್ಣು ನಡುವೆ ಮೂರ್ನಾಲ್ಕು ತಿಂಗಳ ಹಿಂದೆ ಜಗಳವಾಗಿತ್ತು. ನಂತರ ಪರಸ್ಪರ ಇಬ್ಬರು ದೂರವಾಗಿದ್ದರು. ವಿಷ್ಣು ಮೇಲೆ ಕೋಪಗೊಂಡಿದ್ದ ವಿಜಯ್, ಆತನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದಕ್ಕೆ ಪ್ರತಿಯಾಗಿ ವಿಷ್ಣು ಸಹ ಕೊಲೆ ಬೆದರಿಕೆ ಹಾಕಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯ್ ಮತ್ತು ಸ್ನೇಹಿತರು ಡಿ.೩೧ರಂದು ರಾತ್ರಿ ಹೊಸ ವರ್ಷಾಚರಣೆ ಮಾಡಿ ಶ್ರೀನಿವಾಸನಗರದಲ್ಲಿನ ಮನೆಗೆ ನಡೆದು ಹೋಗುತ್ತಿದ್ದರು. ಆಗ ಮಾರ್ಗ ಮಧ್ಯೆ ಎದುರಾಗಿದ್ದ ವಿಷ್ಣು, ವಿಜಯ್‌ಗೆ ನಿಂದಿಸಿ ಜಗಳವಾಡಿದ್ದ. ನಂತರ ಜಗಳ ವಿಕೋಪಕ್ಕೆ ತಿರುಗಿ ಪರಸ್ಪರ ಕೈ ಮಿಲಾಯಿಸಿದ್ದರು. ಈ ಹಂತದಲ್ಲಿ ವಿಷ್ಣು, ವಿಜಯ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಮೃತ ವಿಜಯ್‌ನ ಸ್ನೇಹಿತರು ನೀಡಿದ ಮಾಹಿತಿ ಆಧರಿಸಿ ವಿಷ್ಣುನನ್ನು ಬಂಧಿಸಲಾಗಿದೆ.
ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ:
ಆರೋಪಿ ಕೃತ್ಯದ ನಂತರ ಬಂಧನ ಭೀತಿಯಿಂದ ಟಿ.ನರಸೀಪುರ ಬಳಿಯ ಅರಣ್ಯ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಆಟೋ ಚಾಲಕನಾದ ವಿಷ್ಣು, ಪತ್ನಿಯೊಂದಿಗೆ ಹೊಸಕೆರೆಹಳ್ಳಿಯಲ್ಲಿ ವಾಸವಾಗಿದ್ದ. ಆತನ ವಿರುದ್ಧ ಇತ್ತೀಚೆಗೆ ಗಿರಿನಗರ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net