

ಬೆಂಗಳೂರು: ಜಿಂಕೆ ಕೊಂಬುಗಳು, ಜೀವಂತ ಮಣ್ಣು ಮುಕ್ಕು ಹಾವುಗಳು ಹಾಗೂ ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ವನಮೃಗ ಜಿಂಕೆ ಕೊಂಬುಗಳು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಗಮಂಗಲ ತಾಲೂಕಿನ ಕರಿಕ್ಯಾತನಹಳ್ಳಿಯ ಶೇಖರ್ (೪೦) ಕನಕಪುರದ ರೈಮಂಡ್(೪೫) ಬಂಧಿತರು.
ಬಂಧಿತ ಆರೋಪಿಗಳಿಂದ ೧೨ ಲಕ್ಷ ರೂ.ಮೌಲ್ಯದ ಬಾಳುವ ೧೨ ಜಿಂಕೆ ಕೊಂಬುಗಳನ್ನು ವಶಪಡಿಸಿಕೊಂಡು ಅವುಗಳನ್ನು ಎಲ್ಲಿ ಬೇಟೆಯಾಡಿ ತರಲಾಗಿತ್ತು ಅದರ ಹಿಂದೆ ಯಾರಾದರೂ ಕೈವಾಡ ಇದೆಯೇ ಎನ್ನುವುದರ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಆರೋಪಿಗಳು ಅರಣ್ಯದಲ್ಲಿ ಜಿಂಕೆಗಳನ್ನು ಕೊಂದು ಅವುಗಳ ಮಾಂಸವನ್ನು ಭಕ್ಷ್ಯ ಮಾಡಿ ಕೊಂಬುಗಳನ್ನು ಕತ್ತರಿಸಿಕೊಂಡು ಬಂದು ತಲಾ ಒಂದು ಕೊಂಬಿಗೆ ೧ ಲಕ್ಷ ರೂ.ಗಳಂತೆ ವೈಯಾಲಿಕಾವಲ್ ಬಳಿ ಮಾರಾಟ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತವಾದ ಮಾಹಿತಿಯನ್ನು ಆಧರಿಸಿ ವೈಯಾಲಿಕಾವಲ್ ಪೊಲೀಸ್ ಇನ್‌ಸ್ಪೆಕ್ಟರ್ ಶಂಕರಗೌಡ ಬಸನಗೌಡರ ನೇತೃತ್ವದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿದೆ ಎಂದು
ಮಣ್ಣು ಮುಕ್ಕು ಹಾವು ವಶ:
ಮಣ್ಣು ಮುಕ್ಕುವ ಎರಡು ತಲೆಯ ಎರಡು ಜೀವಂತ ಹಾವುಗಳನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೈಸೂರು ಜಿಲ್ಲೆಯ ನಾಗನಹಳ್ಳಿಯ ಚಂದ್ರಶೇಖರ್( ೪೩) ನನ್ನು ಬಂಧಿಸಲಾಗಿದೆ. ಬಂಧಿತನಿಂದ ಮಣ್ಣುಮುಕ್ಕುವ ಎರಡು ತಲೆಯ ಎರಡು ಹಾವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾವುಗಳು ಸುಮಾರು ೧೦ ಲಕ್ಷ ರೂ.ಬೆಲೆ ಬಾಳಲಿವೆ ಎಂದು ಅಂದಾಜಿಸಲಾಗಿದೆ. ವೈಯಾಲಿಕಾವಲ್ ಬಳಿ ಮಣ್ಣುಮುಕ್ಕುವ ಹಾವುಗಳನ್ನು ಆರೋಪಿಯು ಲಕ್ಷಾಂತರ ಬೆಲೆಗೆ
ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಖಚಿತವಾದ ಮಾಹಿತಿಯನ್ನು ಆಧರಿಸಿ ವೈಯಾಲಿಕಾವಲ್ ಪೊಲೀಸ್ ಇನ್‌ಸ್ಪೆಕ್ಟರ್ ಶಂಕರಗೌಡ ಬಸನಗೌಡರ ನೇತೃತ್ವದ ಸಿಬ್ಬಂದಿ ಬಂಧಿಸಿದೆ.
ಆನೆದಂತ ಜಪ್ತಿ:
ವೈಯಾಲಿಕಾವಲ್ ಬಳಿ ಆನೆಯ ದಂತವನ್ನು ಮಾರಾಟ ಮಾಡಲು ಯತ್ನಿಸುತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕುಣಿಗಲ್ ತಾಲೂಕಿನ ಶೆಟ್ಟಿಬೀಡು ಗ್ರಾಮದ ರಂಗಸ್ವಾಮಿ(೩೮) ಕನಕಪುರದ ಲೋಕೇಶ್ (೩೩) ಬಂಧಿತರು.
ಆರೋಪಿಗಳಿಂದ ೫ ಲಕ್ಷ ರೂ. ಮೌಲ್ಯದ ಆನೆಯ ದಂತವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮೂವರ ಬಂಧನ
ಮತ್ತೊಂದು ಪ್ರಕರಣದಲ್ಲಿ ಪಿಜಿಯಲ್ಲಿದ್ದ ಹುಡುಗರ ರೂಂಗಳಲ್ಲಿ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕಳ್ಳತನ ಮಾಡುತ್ತಿದ್ದ ಶ್ರೀನಾಥ್, ಆತನಿಂದ ಕಡಿಮೆ ಬೆಲೆಗೆ ಖರೀದಿಸುತ್ತಿದ್ದ ಸೆಲ್ವನ್ ಹಾಗೂ ಮಂಜು ಬಂಧಿತ ಆರೋಪಿಗಳು. ಬಂಧಿತರಿಂದ ೭೫ ಲಕ್ಷ ರೂ.ಮೌಲ್ಯದ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಹಳೆಯ ರೂಡಿಗತ ಆರೋಪಿಯಾಗಿರುವ ಶ್ರೀನಾಥ್ ೨೦೧೯ರಲ್ಲಿ ಆರ್.ಎಂ.ಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಲ್ಯಾಪ್‌ಟಾಪ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಬೆಂಗಳೂರು ನಗರದ ವಿವಿಧೆಡೆ ಬೆಳಗ್ಗಿನ ಜಾವ ಪಿಜಿ, ಬ್ಯಾಚುಲರ್ಸ್ ರೂಂಗಳ ಬಳಿ ಹೋಗುತ್ತಿದ್ದ ಆರೋಪಿಯು ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡುತ್ತಿದ್ದ. ನಂತರ ಅವುಗಳನ್ನು ಸೆಲ್ವನ್ ಹಾಗೂ ಮಂಜುಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ಸದಾಶಿವನಗರ ಠಾಣಾ ಪೊಲೀಸರ ತಂಡ ಆರೋಪಿ ಹಾಗೂ ಮತ್ತಿಬ್ಬರನ್ನು ಬಂಧಿಸಿ ಆತ ಕಳ್ಳತನ ಮಾಡಿದ್ದ ೧೩೩ ಲ್ಯಾಪ್‌ಟಾಪ್‌ಗಳು, ೧೯ ಮೊಬೈಲ್ ಫೋನ್‌ಗಳು ಹಾಗೂ ೪ ಟ್ಯಾಬ್ಲೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.