ಕೋಟೆ ವಿದ್ಯಾಗಣಪತಿ ವಿಸರ್ಜನೆಗೆ ಬಂದೋಬಸ್ತ್

01
ನಾಗಮಂಗಲ ಡಿವೈಎಸ್ಪಿ ಕಚೇರಿಯಲ್ಲಿ ಕೋಟೆವಿದ್ಯಾಗಣಪತಿ ವಿಸರ್ಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷತೆಯಲ್ಲಿ ಹಿಂದು-ಮುಸ್ಲಿಂ ಸಮುದಾಯದ ಮುಖಂಡರ ಸೌಹಾರ್ದ ಸಭೆ ಆಯೋಜಿಸಲಾಗಿತ್ತು. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಶ್ರೀನಿವಾಸ್, ಆದರ್ಶ್ ಇದ್ದರು.
Published on

ನಾಗಮಂಗಲ: ಪಟ್ಟಣದ ಐತಿಹಾಸಿಕ ಕೋಟೆ ವಿದ್ಯಾಗಣಪತಿ ವಿಸರ್ಜನೆ ಅ.17ರಂದು ನಡೆಯಲಿದ್ದು, ಕಳೆದ ವರ್ಷ ಎರಡು ಕೋಮುಗಳ ನಡುವೆ ಅಹಿತಕರ ಘಟನೆ ನಡೆದ ಕಾರಣ ಈ ವರ್ಷ ಯಾವುದೇ ಅಹಿತಕರ ಘಟನೆಗಳಾಗದಂತೆ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ನೀಡುವ ಜತೆಗೆ ಸಕಲ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಸೋಮವಾರ ಹಿಂದು-ಮುಸ್ಲಿಂ ಸಮುದಾಯದ ಮುಖಂಡರ ಸೌಹಾದರ್ ಸಭೆಯಲ್ಲಿ ಮಾತನಾಡಿ, ಈ ಬಾರಿ ಯಾವುದೇ ಅಹಿತಕರ ಘಟನೆಗಳಾಗದಂತೆ ಪೊಲೀಸ್ ಇಲಾಖೆ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡಿದೆ. ಕಳೆದ ಬಾರಿ ನಡೆದ ಘಟನೆ ಒಂದು ಕಪ್ಪುಚುಕ್ಕೆಯಾಗಿದ್ದು, ಅದು ಮರೆಯುವಂಥ ಘಟನೆಯಾಗಿಲ್ಲ. ನಂತರ ಮದ್ದೂರಿನಲ್ಲಿಯೂ ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭ ಎರಡು ಕೋಮುಗಳ ನಡುವೆ ಸೌಹಾರ್ದತೆ ಹಾಳಾಯಿತು ಎಂದು ತಿಳಿಸಿದರು.

ಎರಡು ಸಮುದಾಯದಲ್ಲಿನ ಮುಖಂಡರು ಹಾಗೂ ಹಿರಿಯರು ಅಹಿತಕರ ಘಟನೆಗಳನ್ನು ಮಾಡುತ್ತಿಲ್ಲ. ಆದರೆ ಯುವ ಸಮೂಹಕ್ಕೆ, ಮಕ್ಕಳಿಗೆ ಸೌಹಾರ್ದತೆ ಕಾಪಾಡುವಂತೆ ತಿಳಿ ಹೇಳಬೇಕಿದೆ. ಮುಖಂಡರು ತಮ್ಮ ಮಕ್ಕಳಲ್ಲಿ, ಯುವಸಮೂಹಗಳಲ್ಲಿ ಸಾಮರಸ್ಯ ಕಾಪಾಡುವುದು ಹಾಗೂ ಸೌಹಾರ್ದತೆಯ ಬೀಜವನ್ನು ಬಿತ್ತಬೇಕಿದೆ. ಜಿಲ್ಲಾಡಳಿತದ ವತಿಯಿಂದ ಎಲ್ಲ ರೀತಿಯ ರಕ್ಷಣೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರುವಂತೆ ಎರಡು ಸಮುದಾಯದ ಮುಖಂಡರಿಗೆ ಸೂಚಿಸಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ 2-3 ಘಟನೆಗಳು ನಡೆದಿವೆ. ಮತೀಯ ಭಾವನೆಗಳಿಗೆ ಧಕ್ಕೆ ತಾರದಂತೆ ನಡೆದುಕೊಳ್ಳುವಂತೆ ಸೂಚಿಸಲಾಗಿದೆ. ಗಣಪತಿಯ ವಿಸರ್ಜನಾ ಮೆರವಣಿಗೆ ಯಾವ ಮಾರ್ಗದಲ್ಲಿ ಸಾಗಲಿದೆ ಎಂಬುದನ್ನು ಅವರು ಮೆರವಣಿಗೆಯ ಸಮಯ ಖಚಿತಪಡಿಸಿದ ನಂತರ ಅಂತಿಮಗೊಳಿಸಲಾಗುತ್ತದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕೋಟೆ ವಿದ್ಯಾಗಣಪತಿ ವಿಸರ್ಜನಾ ಮೆರವಣಿಗೆ ಈ ಬಾರಿ ಟಿಬಿ ಬಡಾವಣೆಗೆ ಹೋಗಿ ನಂತರ ಮಂಡ್ಯ ಸರ್ಕಲ್‌ಗೆ ಬರಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆಯೋಜಕರು ಕೊಟ್ಟಿರುವ ಮೆರವಣಿಗೆ ಸಾಗುವ ಮಾರ್ಗವನ್ನು ಪರಿಶೀಲಿಸಿ ನಂತರ ಅಂತಿಮಗೊಳಿಸಲಾಗುವುದು. 2023ರಲ್ಲಿ ಕೋಟೆ ಗಣಪತಿ ಮೆರವಣಿಗೆ ಸಂದರ್ಭ ಸಣ್ಣಪುಟ್ಟ ವಾಗ್ವಾದ ನಡೆದಿತ್ತು. ಕಳೆದ ವರ್ಷ ಅದು ದೊಡ್ಡಮಟ್ಟಕ್ಕೆ ಹೋಗಿದೆ. ಈ ಬಾರಿ ಪೊಲೀಸ್ ಬಂದೋಬಸ್ತ್ ಹೆಚ್ಚಿನ ಪ್ರಮಾಣದಲ್ಲಿ ಮಾಡಲಾಗಿದೆ. ಎಲ್ಲ ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಎರಡು ಸಮುದಾಯದವರು ಸಾಮರಸ್ಯದಿಂದ, ಶಾಂತಿಯಿಂದ ನಡೆದುಕೊಳ್ಳಬೇಕು. ಮಸೀದಿ, ದರ್ಗಾಗಳ ಬಳಿ ಪೊಲೀಸ್ ಭದ್ರತೆ ಹಾಕಲಾಗುವುದು. ಮಸೀದಿ ರಕ್ಷಣೆಗೆ ನಿಂತಿದ್ದೇವೆ ಎಂದು ಮುಸ್ಲಿಂ ಸಮುದಾಯದವರು ಗುಂಪು ಕಟ್ಟಿಕೊಂಡು ನಿಲ್ಲುವುದು ಬೇಡ. ಮಸೀದಿ, ದರ್ಗಾವನ್ನು ನಾವು ರಕ್ಷಣೆ ಮಾಡುತ್ತೇವೆ, ಆ ಬಗ್ಗೆ ಆತಂಕ ಬೇಡ. ಮೆರವಣಿಗೆಯಲ್ಲಿ ಬೇರೆ ಕಡೆಯಿಂದ ಬಂದು ಅಹಿತಕರ ಘಟನೆ ಸೃಷ್ಟಿಸಲು ಮುಂದಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಆ ರೀತಿ ನಡೆದರೆ ಆಯೋಜಕರೇ ಹೊಣೆಗಾರಿಕೆ ಹೊರಬೇಕಾಗುತ್ತದೆ. ನಂತರದ ದಿನದಲ್ಲಿಯೇ ಬೆಳ್ಳೂರಿನಲ್ಲಿಯೂ ಗಣೇಶ ವಿಸರ್ಜನೆ ಇರಲಿದ್ದು ಅದಕ್ಕೂ ಅಗತ್ಯ ಕ್ರಮವಹಿಸಲಾಗಿದೆ. ವಿಸರ್ಜನಾ ಮೆರವಣಿಗೆಯಲ್ಲಿ 10 ಟ್ಯಾಬ್ಲೋಗಳು ಪಾಲ್ಗೊಳ್ಳಲಿದ್ದು ಯಾವುದೇ ರೀತಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಸುಪ್ರಿಂಕೋರ್ಟ್ ನಿಯಮದಂತೆ ಡಿಜೆ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದರು.

ಸೋಷಿಯಲ್ ಮೀಡಿಯಾ ಮೇಲೆ ಕಣ್ಗಾವಲು

ಸಾಮಾಜಿಕ ಜಾಲತಾಣಗಳಲ್ಲಿ ಕೋಮುಭಾವನೆಗಳಿಗೆ ಧಕ್ಕೆ ತರುವಂಥ, ಪ್ರಚೋದನೆ ನೀಡುವಂಥ ಪೋಸ್ಟ್‌ಗಳು ಅಥವಾ ವಿಡಿಯೋಗಳನ್ನು ಹರಿಬಿಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಸೋಷಿಯಲ್ ಮೀಡಿಯಾಗಳ ಚಲನವಲನಗಳನ್ನು ಪರಿಶೀಲಿಸಲು ಒಂದು ತಂಡ ರಚಿಸಲಾಗಿದ್ದು, ಈಗಾಗಲೇ ಅದು ಕಾರ್ಯೋನ್ಮುಖವಾಗಿದೆ. ಯಾರೇ ಪ್ರಚೋದನಕಾರಿ ವಿಡಿಯೋಗಳೂ ಅಥವಾ ಪೋಸ್ಟ್‌ಗಳನ್ನು ಹಾಕಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಎಚ್ಚರಿಕೆ ನೀಡಿದರು.

ಮದ್ಯದಂಗಡಿಗಳು ಬಂದ್

ಗಣಪತಿ ವಿಸರ್ಜನಾ ಮೆರವಣಿಗೆ ಇರುವುದರಿಂದ ಅ.17ರಂದು ನಾಗಮಂಗಲ ಪಟ್ಟಣದ ಸುತ್ತಲಿನ 10 ಕಿ.ಮೀ. ವ್ಯಾಪ್ತಿಯ ಎಲ್ಲ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು. ಆ ದಿನ ಮದ್ಯ ಮಾರಾಟಕ್ಕೆ ಅವಕಾಶವಿರುವುದಿಲ್ಲ ಎಂದು ಡಿಸಿ ಡಾ.ಕುಮಾರ ತಿಳಿಸಿದರು.

ಉಪವಿಭಾಗಾಧಿಕಾರಿ ಶ್ರೀನಿವಾಸ್, ಡಿವೈಎಸ್ಪಿ ಚಲುವರಾಜು, ತಹಸೀಲ್ದಾರ್ ಆದರ್ಶ್, ಇನ್‌ಸ್ಪೆಪೆಕ್ಟರ್ ಶಿವಕುಮಾರ್, ಪಿಎಸ್‌ಐ ರಾಜೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net