ನಾನುವಿನ ಸುತ್ತಮುತ್ತ

1-67cb2e1784154
Published on
ಯುವಕರಿಬ್ಬರು ಧ್ಯಾನ, ಜಪ ಹಾಗೂ ವೇದಾಂತ ಅಧ್ಯಯನ ಮಾಡುತ್ತಿದ್ದರು. ಒಂದು ದಿನ, ಅವರು ಒಬ್ಬ ಹಿರಿಯ ಸಾಧುವಿನ ಸಮೀಪಕ್ಕೆ ಬಂದು ಭಕ್ತಿಪೂರ್ವಕ ನಮಸ್ಕಾರ ಸಲ್ಲಿಸಿದರು. ಸಾಧುವು ಅವರ ಆಗಮನದ ಉದ್ದೇಶವನ್ನು ಕೇಳಿದರು. ಆಗ, ಯುವಕರಲ್ಲಿ ಒಬ್ಬನು, ‘ಗುರುಗಳೇ, ನಾನು ದುಃಖದಿಂದ ಹೇಗೆ ಪಾರಾಗಬಹುದು?’ ಎಂದು ಕೇಳಿದನು.

ಅದಕ್ಕೆ ಗುರುಗಳು ನಸುನಗುತ್ತ, ‘ಮಗು, ಉತ್ತರ ನಿನ್ನ ಪ್ರಶ್ನೆಯಲ್ಲಿಯೇ ಇದೆ. ‘ನಾನು’ ಎಂಬ ಭಾವವನ್ನು ತ್ಯಜಿಸು; ಆಗ ದುಃಖದಿಂದ ಮುಕ್ತನಾಗಲು ಸಾಧ್ಯ’ ಎಂದರು. ಇನ್ನೊಬ್ಬ ಯುವಕನು, ‘ಸ್ವಾಮಿ, ನಾನು ಸದಾ ಆನಂದದಿಂದಿರಬೇಕು, ಇದು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದನು. ಗುರುಗಳು ಮತ್ತೊಮ್ಮೆ, ‘ನಿನ್ನ ಪ್ರಶ್ನೆಯಲ್ಲಿಯೇ ಉತ್ತರ ಇದೆ’ ಎಂದರು.

ಅಲ್ಲದೆ, ‘ನಾನು ಯಾರು? ಎಂಬುದನ್ನು ಅರಿಯುವುದರಿಂದ, ನಿತ್ಯಾನಂದವನ್ನು ಅನುಭವಿಸಬಹುದು’ ಎಂದರು. ಗುರುಗಳ ಈ ಎರಡು ಉತ್ತರಗಳು ಪರಸ್ಪರ ವಿರುದ್ಧವಾಗಿವೆ ಎಂದು ಆಲೋಚಿಸುತ್ತಾ ಯುವಕರು ಗೊಂದಲಕ್ಕೆ ಒಳಗಾದರು. ಅದನ್ನು ಗಮನಿಸಿದ ಗುರುಗಳು ಹೀಗೆಂದರು: ‘ನಮ್ಮಲ್ಲಿ ಅನೇಕರು ನಾನು ಎಂದರೆ ದೇಹ-ಮನಸ್ಸು ಎಂಬ ತಪ್ಪು ಪರಿಕಲ್ಪನೆ ಹೊಂದಿರುತ್ತಾರೆ. ನಾವು ದೇಹಕ್ಕೆ ಅಂಟಿಕೊಂಡಿರುವುದರಿಂದ, ಅದು ಸಿಕ್ಕಾಗ ಸ್ವಲ್ಪ ಆನಂದ, ಸಿಗದಿದ್ದಾಗ ದುಃಖ ಮತ್ತು ಮಾನಸಿಕ ತಳಮಳ ಅನುಭವಿಸುತ್ತೇವೆ.

ವಾಸ್ತವವಾಗಿ, ದೇಹ ಮತ್ತು ಮನಸ್ಸು ಉಪಕರಣಗಳು ಮಾತ್ರ. ನಾವು ದುಃಖದಿಂದ ಪಾರಾಗಬಹುದು’. ಇನ್ನು ನಿಜವಾದ ನಾನು ಎಂದರೆ ಆತ್ಮಸ್ವರೂಪಿ, ಚೈತನ್ಯಸ್ವರೂಪಿ. ಇದಕ್ಕೆ ಹುಟ್ಟು-ಸಾವುಗಳಿಲ್ಲ; ಇದು ನಿತ್ಯ, ಜ್ಞಾನಮಯ, ಆನಂದಮಯ. ನಮ್ಮ ನಿಜವಾದ ಸ್ವರೂಪವೇ ಆನಂದ; ಆದ್ದರಿಂದ, ನಾನು ಯಾರು? ಎಂಬ ಜ್ಞಾನವನ್ನು ಅನುಭವಕ್ಕೆ ತರುವುದರಿಂದ, ಸದಾ ಆನಂದವನ್ನು ಅನುಭವಿಸಬಹುದು. ಯುವಕರು, ‘ಉತ್ತರ ಬಹಳ ಸರಳ, ಆದರೆ ಅನುಷ್ಠಾನಕ್ಕೆ ತರುವುದೇ ದೊಡ್ಡ ಸಾಧನೆ, ಕರಕಷ್ಟ’ ಎಂದು ಅಭಿಪ್ರಾಯಪಟ್ಟರು.

ಅದಕ್ಕೆ ಗುರುಗಳು ಪ್ರೀತಿಯಿಂದ, ‘ಕಷ್ಟ, ಆದರೆ ಸಾಧ್ಯ!’ ಎಂದು ಉತ್ತರಿಸಿದರು. ಜೀವನದ ಮಹಾಪಾಠವನ್ನು ಕಲಿತ ಸಂತೋಷದಲ್ಲಿ, ಯುವಕರು ಹೊರಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net