

ಜಗತ್ತನ್ನೇ ಕಾಡುತ್ತಿರುವ ಕರೊನಾದಿಂದ ಕರ್ನಾಟಕವೂ ಬಾಧಿತವಾಗಿದ್ದು, ರಾಜ್ಯದ ಜನತೆ ಲಾಕ್ಡೌನ್ ನಡುವೆ ಸುರಕ್ಷಿತವಾಗಿ ಮನೆಯಲ್ಲಿದ್ದರೂ ಆತಂಕ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಕೈಗೊಂಡಿರುವ ಕ್ರಮಗಳು, ಸಾರ್ವಜನಿಕರ ಆತಂಕ ನಿವಾರಣೆ ನಿಟ್ಟಿನಲ್ಲಿ ಸಮರ್ಪಕ ಮಾಹಿತಿ ಕೊಡುವ ಸಲುವಾಗಿ ಕೋವಿಡ್-19 ನೋಡಲ್ ಅಧಿಕಾರಿ ಡಾ. ಬಿ.ಜಿ. ಪ್ರಕಾಶ್ ಕುಮಾರ್ ಅವರ ಜತೆ ವಿಜಯವಾಣಿ-ದಿಗ್ವಿಜಯ 247 ನ್ಯೂಸ್ ಫೋನ್-ಇನ್ ನಡೆಸಿದ್ದು, ಅದರ ಪ್ರಮುಖಾಂಶಗಳು ಇಲ್ಲಿವೆ.
ಬೆಂಗಳೂರು: ರಾಜ್ಯದಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಟಿ.ಬಿ., ಹೃದ್ರೋಗ ಸೇರಿ ಗಂಭೀರ ಸಮಸ್ಯೆ ಹೊಂದಿರುವ 13 ಲಕ್ಷ ಮಂದಿಯನ್ನು ಗುರುತಿಸಲಾಗಿದ್ದು, ಅವರೆಲ್ಲರ ಆರೋಗ್ಯ ರಕ್ಷಣೆ ಹಾಗೂ ನಿಗಾ ವಹಿಸಲು ಆರೋಗ್ಯ ಮಿತ್ರ ವ್ಯವಸ್ಥೆ ರೂಪಿಸಲಾಗಿದೆ ಎಂದು ಕೋವಿಡ್-19 ನೋಡಲ್ ಅಧಿಕಾರಿ ಡಾ. ಬಿ.ಜಿ. ಪ್ರಕಾಶ್ ಕುಮಾರ್ ತಿಳಿಸಿದ್ದಾರೆ. ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಆಯೋಜಿಸಿದ್ದ ಫೋನ್-ಇನ್ ಕಾರ್ಯಕ್ರಮದಲ್ಲಿ ಕರೊನಾ ಕುರಿತ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಕರೊನಾ ಸಂದರ್ಭದಲ್ಲಿ ಇತರ ರೋಗಿಗಳಿಗೆ ತೊಂದರೆ ಆಗಬಾರದು. ಜಿಲ್ಲಾಸ್ಪತ್ರೆಗಳು ಸೇರಿ ಅನೇಕ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳ ಚಿಕಿತ್ಸೆ, ಪರೀಕ್ಷೆ ನಡೆಯುತ್ತಿರುವ ಕಾರಣ ಆಗಮಿಸಲು ಕಷ್ಟವಾಗಬಹುದು. ಪಟ್ಟಿ ಮಾಡಿರುವ 13 ಲಕ್ಷ ರೋಗಿಗಳನ್ನು ಆಶಾ ಕಾರ್ಯಕರ್ತೆಯರು ಸಂರ್ಪಸಿ ಅವರಿಗೆ ‘ಆರೋಗ್ಯ ಮಿತ್ರ’ ಆಪ್ ಕುರಿತು ಮಾಹಿತಿ ನೀಡಲಿದ್ದಾರೆ. ಅವರ ಹೆಸರನ್ನು ನೋಂದಾಯಿಸಿಕೊಡಲಿದ್ದಾರೆ. ಇದರಿಂದ ತುರ್ತು ಸಮಸ್ಯೆ ಹೊರತು ಪಡಿಸಿ ಉಳಿದಂತೆ ರೋಗಿಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾದರೆ ಆಪ್ ಮೂಲಕ ವೈದ್ಯರಿಂದ ಮಾಹಿತಿ ಪಡೆಯಬಹುದು. 2-3 ದಿನಗಳಿಗೊಮ್ಮೆ ವೈದ್ಯರೇ ಸಂರ್ಪಸಿ ಆರೋಗ್ಯದ ಮಾಹಿತಿ ಪಡೆಯುತ್ತಾರೆ ಹಾಗೂ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ. ಈ ಸಂಪರ್ಕದಿಂದ ವೈದ್ಯರು ಸಹ ಆಗಾಗ್ಗೆ ರೋಗಿಗಳನ್ನು ಸಂರ್ಪಸಿ ಅವರ ಆರೋಗ್ಯದ ಕುರಿತು ಮಾಹಿತಿ ಪಡೆಯಲಿದ್ದಾರೆ ಎಂದು ಡಾ.ಪ್ರಕಾಶ್ ಕುಮಾರ್ ತಿಳಿಸಿದರು.
ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿಯಂತ್ರಣ ಕಾರ್ಯಕ್ರಮದ ಸಂಶೋಧನಾಧಿಕಾರಿ ಡಾ. ಮೊಹಮ್ಮದ್ ಷರೀಫ್ ಉಪಸ್ಥಿತರಿದ್ದು ಸಾರ್ವಜನಿಕರ ಪ್ರಶ್ನೆಗಳಿಗೆ ಪೂರಕ ಮಾಹಿತಿ, ಅಂಕಿ-ಅಂಶಗಳನ್ನು ಒದಗಿಸಿದರು.
ಮುನ್ನೆಚ್ಚರಿಕೆ ಕ್ರಮಗಳು: ಕರೊನಾ ಸೋಂಕಿನ ಕಾರಣಕ್ಕೆ ಆಹಾರ, ಔಷಧ, ವೈದ್ಯಕೀಯ ವ್ಯವಸ್ಥೆ, ಪೊಲೀಸ್, ಮಾಧ್ಯಮ ಮುಂತಾದ ಅತ್ಯಗತ್ಯ ಸೇವೆ ಸಲ್ಲಿಸುವವರು ಮನೆಯಿಂದ ಹೊರಗೆ ಕಾಲಿಡಲೇಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ, ಮನೆಗೆ ಹಿಂದಿರುಗಿದಾಗ ಹಾಗೂ ಆಹಾರ ಸಾಮಗ್ರಿ ಖರೀದಿಸಿದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಡಾ. ಪ್ರಕಾಶ್ ಕುಮಾರ್ ಮಾಹಿತಿ ನೀಡಿದ್ದಾರೆ. =ಕೈಕಾಲು ತೊಳೆದುಕೊಂಡು ಮನೆ ಪ್ರವೇಶಿಸಿ =ನೇರವಾಗಿ ಬಚ್ಚಲು ಮನೆಗೆ ತೆರಳಿ =ಬಿಸಿ ನೀರಿನಲ್ಲಿ ಡಿಟರ್ಜೆಂಟ್ ಬೆರೆಸಿ, ಧರಿಸಿದ್ದ ಬಟ್ಟೆಯನ್ನು ಅದರಲ್ಲಿ ಹಾಕಿ =ಸ್ನಾನ ಮಾಡಿ =ಆಶಾ ಕಾರ್ಯಕರ್ತೆಯರು, ವೈದ್ಯರು ಸೇರಿ ಸೋಂಕಿತ ಪ್ರದೇಶಕ್ಕೆ ತೆರಳುವ ಕರೊನಾ ವಾರಿಯರ್ಸ್ ಪಾದರಕ್ಷೆ ಮೇಲೆ ಕವರ್ ಧರಿಸಿ. ಮನೆಗೆ ಹೋದಮೇಲೆ ಮುಚ್ಚಿದ ಕಸದ ಬುಟ್ಟಿಯಲ್ಲಿ ಅದನ್ನು ಹಾಕಿ. =ಹಣ್ಣು-ತರಕಾರಿಗಳನ್ನು ಒಳಗೆ ಕೊಂಡೊಯ್ಯುವ ಮೊದಲೇ ಉಪು್ಪ ನೀರಿನಲ್ಲಿ ಒಮ್ಮೆ ತೊಳೆಯಬೇಕು. =ಪ್ಯಾಕ್ ಮಾಡಿದ ದಿನಸಿ ಸಾಮಾನುಗಳಿದ್ದರೆ ತೊಳೆಯಬಹುದು. ತೊಳೆಯಲು ಸಾಧ್ಯವಾಗದಿದ್ದರೆ ಕವರನ್ನು ಬಟ್ಟೆಯಿಂದ ಒರೆಸಿ ಒಳಗಿಡಿ.
ಪಿಪಿಇ ಕಿಟ್ ವ್ಯವಸ್ಥೆ: ಸದ್ಯ ರಾಜ್ಯದಲ್ಲಿ ಪಿಪಿಇ(ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ವೆುಂಟ್) ಕಿಟ್ಗಳ ಸಮಸ್ಯೆ ಇಲ್ಲ. ಅಗತ್ಯ ದಾಸ್ತಾನಿದ್ದು, ಶೀಘ್ರದಲ್ಲೇ ಇನ್ನಷ್ಟು ಕಿಟ್ ವ್ಯವಸ್ಥೆ ಆಗಲಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ, ನಿಗಾ ವಹಿಸುವವರು, ಸೋಂಕಿತರಿರುವ ಐಸೋಲೇಷನ್ ವಾರ್ಡ್ ಹಾಗೂ ಶಂಕಿತರಿರುವ ಕ್ವಾರಂಟೈನ್ ವಾರ್ಡ್ ಸ್ವಚ್ಛಗೊಳಿಸುವವರು ಪಿಪಿಇ ಸೂಟ್ ಕಡ್ಡಾಯವಾಗಿ ಬಳಸಬೇಕು.
ಫೀವರ್ ಕ್ಲಿನಿಕ್ ಸೌಲಭ್ಯ ಪಡೆಯಿರಿ: ವಿಕ್ಟೋರಿಯಾ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸ ಲಾಗಿದ್ದು, ಇಲ್ಲಿ ಸೋಂಕು ದೃಢಪಟ್ಟವರನ್ನು ಮಾತ್ರವೇ ದಾಖಲಿಸಿ ಚಿಕಿತ್ಸೆ ನೀಡಲಾಗುವುದು. ಉಳಿದಂತೆ ನಿಗದಿತ ಆಸ್ಪತ್ರೆಗಳಲ್ಲಿ ಸೋಂಕಿತ-ಶಂಕಿತರ ಸ್ವಾ್ಯಬ್ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಗಳಿಗೆ ಕಳುಹಿಸಲಾಗುವುದು. ಹೀಗಾಗಿ ಜ್ವರ, ನೆಗಡಿ, ಕೆಮ್ಮು ಸೇರಿ ರೋಗ ಲಕ್ಷಣಗಳು ಕಾಣಿಸಿಕೊಂಡವರು ಹತ್ತಿರದ ಫೀವರ್ ಕ್ಲಿನಿಕ್ಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇರುವವರು ಜಿಲ್ಲಾ, ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಬೇಕು. ಗುಣಮುಖರಾದ ನಂತರ ಮತ್ತೆ 2 ಬಾರಿ ನೆಗೆಟಿವ್ ವರದಿ ಬಂದರಷ್ಟೇ ಬಿಡುಗಡೆ ಮಾಡುತ್ತೇವೆ. ನಂತರವೂ 14 ದಿನ ಮನೆಯಲ್ಲಿ ಕ್ವಾರಂಟೈನ್, ನಂತರ 14 ದಿನ ಸ್ವಯಂ ದಿಗ್ಬಂಧನದಲ್ಲಿ ಇರಿಸಲಾಗುತ್ತದೆ. ರೋಗ ಮತ್ತೆ ಹರಡದಂತೆ ಎಲ್ಲ ಎಚ್ಚರಿಕೆ ಕೈಗೊಳ್ಳಲಾಗುತ್ತದೆ.
ಎಚ್ಚರಿಕೆಯೇ ಮದ್ದು: ಕರೊನಾ ಸೋಂಕಿಗೆ ನಿಖರ ಔಷಧ ಇಲ್ಲ, ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುವುದು. ಹೀಗಾಗಿ ವೈದ್ಯರ ಸಲಹೆ ಸರಿಯಾಗಿ ಪಾಲಿಸುವವರು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಮಂದಿ ಗುಣ ಹೊಂದುತ್ತಿದ್ದಾರೆ. ಆದರೆ ವೃದ್ಧರು, ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಇದು ಮಾರಕ. ಹೀಗಾಗಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ.
* ಜನಸಾಂದ್ರತೆ ಹೆಚ್ಚಿರುವ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸಿದರೆ ಸಿದ್ಧತೆ ಹೇಗಿದೆ? ವೈದ್ಯಕೀಯ ಸಿಬ್ಬಂದಿ ಸುರಕ್ಷತೆಗೆ ಕ್ರಮ?
| ಮುನಿಯಪ್ಪ ಕನಕನ ಪಾಳ್ಯ
- ಲಾಕ್ಡೌನ್ ಜಾರಿಯಲ್ಲಿ ಇರುವವರೆಗೂ ಸಂಪೂರ್ಣ ಪರಿಸ್ಥಿತಿಯ ಚಿತ್ರಣ ಸಿಗುವುದಿಲ್ಲ. ಹಂತಹಂತವಾಗಿ ಲಾಕ್ಡೌನ್ ವಿನಾಯಿತಿ ನೀಡುತ್ತ ಹೋದರೆ ಒಟ್ಟಾರೆ ಸೋಂಕಿನ ಪ್ರಮಾಣ ಅರಿವಿಗೆ ಬರುತ್ತದೆ. 20-30 ಸಾವಿರ ಸೋಂಕಿತರು ಪತ್ತೆಯಾದರೂ ನಿರ್ವಹಿಸುವಷ್ಟು ಸಿದ್ಧತೆ ಆಗಿದೆೆ. ವೈದ್ಯಕೀಯ ಸಿಬ್ಬಂದಿಗೆ ಸರ್ಕಾರ ವಿಮೆ, ಪಿಪಿಇ ಜತೆಗೆ ಒಂದು ವಾರದ ಕೆಲಸದ ನಂತರ ಒಂದು ವಾರ ವಿಶ್ರಾಂತಿ ನೀಡುತ್ತಿದ್ದೇವೆ.
* 60 ವರ್ಷ ದಾಟಿದೆ, ಮಧುಮೇಹ ಇದೆ. ಈಗ ಯಾವ ಮುನ್ನೆಚ್ಚರಿಕೆ ಕೈಗೊಳ್ಳಬೇಕು?
| ಶಕುಂತಲಾ, ವೆಂಕಟಾಚಲಪತಿ ಯಲಹಂಕ
- 60 ವರ್ಷ ಮೇಲ್ಪಟ್ಟ ಎಲ್ಲರೂ ಹಾಗೂ ಎಲ್ಲ ವಯೋಮಾನದ ಕೋಮಾರ್ಬಿಡ್ (ಮಧುಮೇಹ, ಹೃದ್ರೋಗ, ಸೋಂಕು ರೋಗಗಳು, ಕ್ಯಾನ್ಸರ್...) ರೋಗಿಗಳು ಹೆಚ್ಚು ಎಚ್ಚರಿಕೆಯಿಂದ ಇರಲೇಬೇಕು. ಔಷಧ ಮುಂದುವರಿಸಿ, ಹೊರಗೆ ಹೋಗಲೇ ಬೇಡಿ, ಹೆಚ್ಚು ವಿಶ್ರಾಂತಿ ಪಡೆಯಿರಿ, ಮನೆಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಬಳಸಿ. ಹೊರಹೋಗಲೇಬೇಕಾದರೆ ಮಾಸ್ಕ್ ಬಳಸಿ, ಜನಸಂದಣಿ ಕಡಿಮೆ ಇರುವೆಡೆಗೆ ಮಾತ್ರ ತೆರಳಿ. ಅಗತ್ಯಬಿದ್ದರೆ 14410 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
* ಸಾಮಾಜಿಕ ಜಾಲತಾಣದ ವದಂತಿಗಳಿಂದ ಗೊಂದಲ ಹೆಚ್ಚಾಗುತ್ತಿದೆ, ಇದಕ್ಕೆ ಪರಿಹಾರವೇನು?
| ಮುತ್ತು ಸಹಕಾರ ನಗರ
- ಆರೋಗ್ಯ ಇಲಾಖೆಯಿಂದ ದಿನಕ್ಕೆರಡು ಬಾರಿ ಅಧಿಕೃತ ಪ್ರಕಟಣೆ ಹೊರಡಿಸಲಾಗುತ್ತಿದೆ. ಇಲಾಖೆಯ ಟ್ವಿಟ್ಟರ್-ಫೇಸ್ಬುಕ್ ನೋಡಿ. - ದಿನಪತ್ರಿಕೆಗಳ ಮೂಲಕ ನಿಖರ ಸುದ್ದಿಗಳನ್ನು ಓದಿ.
* ಮಾ.2ರಂದು ದುಬೈನಿಂದ ಬಂದ ನಂತರ 14 ದಿನ ಹೋಂ ಕ್ವಾರಂಟೈನ್ ಆದೆ. ಮಾ.30ಕ್ಕೆ ಪರೀಕ್ಷೆ ಮಾಡಿಸಿದಾಗಲೂ ನೆಗೆಟಿವ್ ಬಂದಿದೆ. ಈಗ ಸ್ವಲ್ಪ ದಿನದಿಂದ ಗಂಟಲು ಸೋಂಕು ಆಗಿದೆ?
| ಸಿದ್ದರಾಮನಗೌಡ
- 28-30 ದಿನಗಳವರೆಗೂ ಒಬ್ಬ ವ್ಯಕ್ತಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಬಹುಶಃ ರೋಗಲಕ್ಷಣ ರಹಿತವಾಗಿ ಸೋಂಕು ಇರಬಹುದು, ಪರೀಕ್ಷೆ ಮಾಡಿಸಿಕೊಳ್ಳಿ.
* ಲಾಕ್ಡೌನ್ ಮುಂದುವರಿಯಲಿ, ಹೋಟೆಲ್ಸ್ ಬಂದಾಗಿರಲಿ, ಎಲ್ಲೆಡೆ ಸೋಂಕುನಿವಾರಕ ಸಿಂಪಡಿಸಿ.
| ಜಯದೇವ್ ದಾಸರಹಳ್ಳಿ
- ತಮ್ಮ ಸಲಹೆಯನ್ನು ತಾಂತ್ರಿಕ ಸಮಿತಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ. ಸೋಂಕುನಿವಾರಕವೂ ರಾಸಾಯನಿಕವಾದ್ದರಿಂದ ಎಲ್ಲೆಂದರಲ್ಲಿ ಸಿಂಪಡಿಸುವಂತಿಲ್ಲ. ವೈಜ್ಞಾನಿಕವಾಗಿ ಬಳಸಲಾಗುತ್ತದೆ.
* ಕರೊನಾ ಸೋಂಕು ಹೆಚ್ಚಾಗುತ್ತಲೇ ಇದೆ. ಲಾಕ್ಡೌನ್ ಸಡಿಲಿಕೆ, ನೋಟು ಕಾರಣವೇ?
| ಸಂಜೀವ್ ಕೆ.ಆರ್. ಪುರ
- ಈಗ ತಪಾಸಣೆ-ಪರೀಕ್ಷೆ ಹೆಚ್ಚಾದ್ದರಿಂದ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲಾಕ್ಡೌನ್ ಹಂತಹಂತ ವಾಗಷ್ಟೇ ಸಡಿಲಿಸಲಾಗುತ್ತದೆ. ಯಾವುದೇ ವಸ್ತುವಿನ ಜತೆ ಸಂಪರ್ಕದ ಅವಧಿ ಎಷ್ಟಿತ್ತು ಎನ್ನುವುದರ ಮೇಲೆ ಸೋಂಕು ಹರಡುವಿಕೆ ನಿರ್ಧಾರ ಆಗುತ್ತದೆ. ನೋಟಿನಿಂದ ಸೋಂಕು ಹರಡುವ ಕುರಿತು ಖಾತ್ರಿ ಇಲ್ಲ.
* ಎಲ್ಲರೂ ಆರೋಗ್ಯ ಸೇತು ಆಪ್ ಅಳವಡಿಸಿಕೊಂಡ ರಷ್ಟೇ ಸೋಂಕಿತ ಪತ್ತೆಯಾಗಲು ಸಾಧ್ಯ?
| ರವಿಕುಮಾರ್ ಕೆಂಗೇರಿ
- ಹಾಗಲ್ಲ, ಪತ್ತೆಯಾಗಿರುವ ಕರೊನಾ ಸೋಂಕಿತರ ಸ್ಥಳವನ್ನು ಜಿಯೋಲೊಕೇಷನ್ ಮಾಡಲಾಗಿರುತ್ತದೆ. ನೀವು ಅಲ್ಲಿಗೆ ಅದು ಹೋದಾಗ ಎಚ್ಚರಿಕೆ ನೀಡುತ್ತದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಹಕರಿಸುತ್ತದೆ.
* ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ನಡೆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಅಪಾಯವಲ್ಲವೇ?
| ಅಯ್ಯಣ್ಣ-ಪೀಣ್ಯ
ವಿಜಯಕುಮಾರ್- ಗಂಗೊಂಡನಹಳ್ಳಿ
- ಮನೆಯಲ್ಲೇ ಉಪವಾಸ-ನಮಾಜ್ ಮಾಡಬೇಕೆಂದು ಸರ್ಕಾರದ ಜತೆಗೆ ಸಮುದಾಯದ ಮುಖಂಡರು, ಮಸೀದಿ ಮುಖ್ಯಸ್ಥರೂ ಆದೇಶ, ಮಾಹಿತಿ ನೀಡಿದ್ದಾರೆ. ಇದರ ಉಲ್ಲಂಘನೆ ಆಗುತ್ತಿದ್ದರೆ ಪೊಲೀಸರ ಗಮನಕ್ಕೆ ತನ್ನಿ.
* ನಮ್ಮ ಪ್ರಿಸ್ಕೂಲ್ ಯಾವಾಗಿನಿಂದ ಆರಂಭಿಸಬಹುದು? ನಾನು ಸೆಪ್ಟೆಂಬರ್ನಲ್ಲಿ ವಿದೇಶಕ್ಕೆ ತೆರಳಬಹುದೇ?
| ಜೆ. ಸುಮನಾ ಬೆಂಗಳೂರು
- ಶಾಲೆ ಆರಂಭದ ಕುರಿತು ಮೇ ಅಂತ್ಯದಲ್ಲಿ ಸರ್ಕಾರ ನಿರ್ಧರಿಸುತ್ತದೆ. ಇನ್ನೂ ಕೆಲವು ತಿಂಗಳು ವಿದೇಶ ಪ್ರಯಾಣ ರದ್ದುಪಡಿಸಿ, ನಿಖರ ಸುದ್ದಿಗೆ ದಿನಪತ್ರಿಕೆ ಓದಿ.
* ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡುತ್ತಿಲ್ಲ, ಜಿಲ್ಲಾ ಕೇಂದ್ರದಲ್ಲಿ ಹೆಚ್ಚು ಸಮಯ ತಗಲುತ್ತಿದೆ. ನೆರೆ ರಾಜ್ಯಗಳಿಂದ ಜನರು ಕದ್ದುಮುಚ್ಚಿ ಬರುತ್ತಿದ್ದಾರೆ. ಚಿತ್ತಾಪುರದಲ್ಲಿ ಸಿಮೆಂಟ್ ಕಾರ್ಖಾನೆ ಕೆಲಸ ಮಾಡುತ್ತಿದೆ.
| ಶಿವರಾಜ್ ರಾಯಚೂರು
ನರಹರಿ ಕುಲಕರ್ಣಿ ಚಿತ್ತಾಪುರ
- ಸಣ್ಣಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ತೆರಳಬೇಡಿ. ಆದಷ್ಟೂ ಮನೆಯಲ್ಲೇ ಸರಿಪಡಿಸಿಕೊಳ್ಳಿ. 14410 ಸಹಾಯವಾಣಿ ಮೂಲಕ ವೈದ್ಯರ ಸಲಹೆ ಪಡೆಯಿರಿ. ಸ್ಥಳೀಯ ಪರಿಸ್ಥಿತಿ ನೋಡಿ ಕಾರ್ಖಾನೆಗಳಿಗೆ ಅನುಮತಿ ನೀಡಿರಬಹುದು. ನೆರೆ ರಾಜ್ಯಗಳಿಂದ ಯಾರೇ ಬಂದರೂ ಪೊಲೀಸ್-ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ.