ನಿವೃತ್ತ ಸೇನಾ ಸಿಬ್ಬಂದಿಯಿಂದ ದೇವಸ್ಥಾನಕ್ಕೆ 4 ಕೋಟಿ ರೂ. ಮೌಲ್ಯದ ಆಸ್ತಿ ದಾನ...Army Veteran

Army Veteran Donates
Published on

Army Veteran: ನಿವೃತ್ತ ಸೇನಾ ಯೋಧ ಎಸ್. ವಿಜಯನ್ ಅವರು ತಮ್ಮ 4 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದೇವಸ್ಥಾನಕ್ಕೆ ಅರ್ಪಿಸುವ ಮೂಲಕ ದೇವರಿಗೆ ದಾನ ಮಾಡಿದ್ದಾರೆ.

ನಡೆದಿದ್ದೇನು?:

ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರುಲ್ಮಿಗು ರೇಣುಗಾಂಬಳ್ ಅಮ್ಮನ್ ದೇವಸ್ಥಾನದಲ್ಲಿದೆ. ದೇವಸ್ಥಾನದಲ್ಲಿರುವ ಕಾಣಿಕೆ ಹುಂಡಿಯನ್ನು ತೆರೆದಾಗ, ನೋಟುಗಳು ಮತ್ತು ನಾಣ್ಯಗಳ ಜೊತೆಗೆ ಎರಡು ಮೂಲ ಆಸ್ತಿ ದಾಖಲೆಗಳು ಕಂಡುಬಂದಿವೆ. ಒಂದು ಆಸ್ತಿ 3 ಕೋಟಿ ರೂ. ಮತ್ತು ಇನ್ನೊಂದು 1 ಕೋಟಿ ರೂ. ಮೌಲ್ಯದ್ದಾಗಿತ್ತು. ಇದರೊಂದಿಗೆ ಒಂದು ಪತ್ರವೂ ಪತ್ತೆಯಾಗಿದೆ. ಅದರಲ್ಲಿ, ವಿಜಯನ್ ಅವರು ದೇವರಿಗೆ ಈ ಆಸ್ತಿಯನ್ನು ಸ್ವಯಂಪ್ರೇರಣೆಯಿಂದ ಅರ್ಪಿಸಿರುವುದಾಗಿ ಬರೆದಿದ್ದಾರೆ.

ಆಸ್ತಿ ದಾಖಲೆಗಳನ್ನು ದೇಣಿಗೆ ಪೆಟ್ಟಿಗೆಯಲ್ಲಿ ಹಾಕುವುದರಿಂದ ಆಸ್ತಿ ಕಾನೂನುಬದ್ಧವಾಗಿ ವರ್ಗಾವಣೆಯಾಗುವುದಿಲ್ಲ. ನೋಂದಣಿ ಇಲಾಖೆಯಲ್ಲಿ ಸರಿಯಾದ ನೋಂದಣಿ ಇಲ್ಲದೆ, ದೇವಸ್ಥಾನವು ಆಸ್ತಿಯ ಹಕ್ಕನ್ನು ಹೊಂದಿಲ್ಲ. ಆದ್ದರಿಂದ, ಈ ದಾಖಲೆಗಳನ್ನು ಪ್ರಸ್ತುತ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ದಾನ ಮಾಡಿದ ಆಸ್ತಿಗಳಲ್ಲಿ ದೇವಸ್ಥಾನದ ಬಳಿಯ 10 ಸೆಂಟ್ಸ್ ಭೂಮಿ ಮತ್ತು ಒಂದು ಅಂತಸ್ತಿನ ಮನೆ ಸೇರಿವೆ. ದೇವಸ್ಥಾನದ ಅಧಿಕಾರಿಗಳ ಪ್ರಕಾರ ಇದರ ಒಟ್ಟು ಮೌಲ್ಯ ಸುಮಾರು 4 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ದೇವಾಲಯದ ಭಕ್ತ ಎಸ್. ವಿಜಯನ್, ಅರ್ಣಿ ಬಳಿಯ ಕೇಶವಪುರಂ ಗ್ರಾಮದವರು. ಅವರು ಕಳೆದ 10 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದಾರೆ. ಭಿನ್ನಾಭಿಪ್ರಾಯಗಳಿಂದಾಗಿ ಅವರು ಮತ್ತು ಅವರ ಪತ್ನಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರ ಹೆಣ್ಣುಮಕ್ಕಳು ತಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ತಮ್ಮನ್ನು ಬೆಂಬಲಿಸಿದ ದೇವತೆಗೆ ತಮ್ಮಲ್ಲಿರುವ ಎಲ್ಲವನ್ನೂ ಅರ್ಪಿಸುತ್ತಿರುವುದಾಗಿ ವಿಜಯನ್ ಹೇಳುತ್ತಾರೆ.

ಹೆಣ್ಣುಮಕ್ಕಳು ಆಸ್ತಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ದೇವಾಲಯದ ಆಡಳಿತಾಧಿಕಾರಿಗಳೊಂದಿಗೆ ಸಮಾಲೋಚಿಸಿ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ವಿಜಯನ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net