

ನವದೆಹಲಿ: ಇಂದು (ಡಿ.24) ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಾರತೀಯ ಸೇನಾ ಟ್ರಕ್ ರಸ್ತೆಯಲ್ಲಿ ಸಾಗುವಾಗ ಮಾರ್ಗ ಮಧ್ಯೆ ಜಾರಿದ ಪರಿಣಾಮ ವಾಹನ 300 ಅಡಿ ಆಳದ ಕಮರಿಗೆ ಉರುಳಿ, ಐವರು ಸೈನಿಕರು ( Soldiers) ಮೃತಪಟ್ಟ ಘಟನೆ ಘರೋವಾದಲ್ಲಿ ವರದಿಯಾಗಿದೆ.
ಟ್ರಕ್ ಕಮರಿಗೆ ಉರುಳಿಬಿದ್ದ ಪರಿಣಾಮ ಐವರು ಸೈನಿಕರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಸೇನಾ ವಾಹನವು ಜಿಲ್ಲೆಯ ಬನೋಯ್‌ಗೆ ತೆರಳುತ್ತಿದ್ದಾಗ ಘರೋವಾ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೈಟ್ ನೈಟ್ ಕಾರ್ಪ್ಸ್ನ (WhiteKnightCorps) ಎಲ್ಲಾ ಶ್ರೇಣಿಗಳು ಪೂಂಚ್ ಸೆಕ್ಟರ್‌ನಲ್ಲಿ ಕಾರ್ಯಾಚರಣೆಯ ಕರ್ತವ್ಯದ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಐವರು ಯೋಧರ ಸಾವಿನ ಸುದ್ದಿಗೆ ಭಾರತೀಯ ಸೇನೆ ಸಂತಾಪ ಸೂಚಿಸಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನೆ ತಿಳಿಸಿದೆ.