

Mamata Banerjee: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ನಡೆದ ದೌರ್ಜನ್ಯಗಳನ್ನು ಪ್ರತಿಭಟಿಸಲು ಕೊಲ್ಕೊತ್ತಾದಲ್ಲಿ ನಿರ್ಮಿಸಿದ್ದ ಟಿಎಂಸಿ ಪಕ್ಷ ನಿರ್ಮಿಸಿದ್ದ ವೇದಿಕೆಯನ್ನು ಭಾರತೀಯ ಸೇನೆ ಕೆಡವಿದ್ದು ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ಭಾರತೀಯ ಸೇನೆಯ ಜಾಗದಲ್ಲಿ ಕೆಡವಿದ್ದ ವೇದಿಕೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಸೇನೆಯನ್ನು ದೂಷಿಸುವುದಿಲ್ಲ, ಆದರೆ ಬಿಜೆಪಿಯ ಸೇಡಿನ ರಾಜಕೀಯ ಇದರ ಹಿಂದೆ ಇದೆ. ಕೇಂದ್ರ ಬಿಜೆಪಿ ಸರ್ಕಾರವನ್ನು ದೂಷಿಸಬೇಕು. ವೇದಿಕೆ ಕಡೆವಲು ಭಾರತೀಯ ಸೇನೆಯನ್ನು ದುರುಪಯೋಗಪಡಿಸಿಕೊಂಡಿದೆ. ಇದು ಅನೈತಿಕ, ಪ್ರಜಾಪ್ರಭುತ್ವ ವಿರೋಧಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸೇನೆಯು ಕ್ರಮ ಕೈಗೊಳ್ಳುವ ಮೊದಲು ಕೋಲ್ಕತ್ತಾ ಪೊಲೀಸರು ಅಥವಾ ಅವರನ್ನು ಸಂಪರ್ಕಿಸಬೇಕಾಗಿತ್ತು. ಅವರು ನನಗೆ ಕರೆ ಮಾಡಬಹುದಿತ್ತು, ನಾನು ಕೆಲವೇ ನಿಮಿಷಗಳಲ್ಲಿ ವೇದಿಕೆಯನ್ನು ತೆಗೆದುಹಾಕುತ್ತಿದ್ದೆ. ನಾನು ಸೈನ್ಯವನ್ನು ದೂಷಿಸಲ್ಲ, ಆದರೆ ಬಿಜೆಪಿಯ ಕೈಯಲ್ಲಿ ಆಟದ ಗೊಂಬೆಯಾಗಬೇಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆ ಅಧಿಕಾರಿ, ಎರಡು ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲಾಗಿತ್ತು. ಆದಾಗ್ಯೂ, ವೇದಿಕೆಯನ್ನು ಸುಮಾರು ಒಂದು ತಿಂಗಳಿನಿಂದ ಅದೇ ಸ್ಥಳದಲ್ಲಿ ನಿರ್ಮಿಸಲಾಗಿದೆ. ತಾತ್ಕಾಲಿಕ ವೇದಿಕೆಯನ್ನು ತೆಗೆದುಹಾಕುವಂತೆ ಸಂಘಟಕರಿಗೆ ಹಲವಾರು ಪತ್ರಗಳನ್ನು ಕಳುಹಿಸಲಾಗಿದೆ. ಆದಾಗ್ಯೂ, ಅದನ್ನು ತೆಗೆದುಹಾಕಲಾಗಿಲ್ಲ.
ಭಾರತೀಯ ಸೇನೆ (ಸ್ಥಳೀಯ ಮಿಲಿಟರಿ ಪ್ರಾಧಿಕಾರ, ಕೋಲ್ಕತ್ತಾ) ಸಾಮಾನ್ಯವಾಗಿ ಮೈದಾನ್ ಪ್ರದೇಶದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡುತ್ತದೆ. ವೇದಿಕೆ ಸುಮಾರು ತಿಂಗಳಿನಿಂದ ಉಳಿದಿದ್ದರಿಂದ ಕೆಡವಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅನುಸರಿಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. (ಏಜೆನ್ಸೀಸ್)