

ನವದೆಹಲಿ: ಸೇನಾ ಬಸ್ (Army Bus) ಗುರಿಯಾಗಿಸಿಕೊಂಡು ನಡೆದ ಬಾಂಬ್ ದಾಳಿಯಲ್ಲಿ ನಾಲ್ವರು ಯೋಧರು (Soldiers) ಮೃತಪಟ್ಟಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಟರ್ಬತ್ನಲ್ಲಿ ನಡೆದಿದೆ. ಘಟನೆಯಲ್ಲಿ 32 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಐವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಸ್ಟೇಷನ್ ಹೌಸ್ ಅಧಿಕಾರಿಯೊಬ್ಬರು, ಟರ್ಬತ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಘಟನೆ ನಡೆದಾಗ ಬಸ್ಸಿನಲ್ಲಿ 48 ಮಂದಿ ಯೋಧರಿದ್ದರೆಂದು ವರದಿಯಾಗಿದೆ. ಬಾಂಬ್ ದಾಳಿಗೆ ನಾಲ್ವರು ಸುಟ್ಟು ಕರಕಲಾಗಿದ್ದು, ಐದು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಘಟನೆ ಬಳಿಕ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (BLA) ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.