

ನವದೆಹಲಿ: ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ ಅಲ್ಲಿಯವೇರೆಗೂ ಮೋಸ ಮಾಡುವವರು ಇರುತ್ತಾರೆ ಎಂಬುದಕ್ಕೆ ನಮ್ಮ ಸುತ್ತ ಪ್ರತಿನಿತ್ಯ ನಡೆಯುವ ಘಟನೆಗಳೇ ಜೀವಂತೆ ಸಾಕ್ಷಿಯಾಗಿರುತ್ತದೆ. ಹೀಗಿರುವಾಗಲೇ ಜನರು ಬಣ್ಣದ ಮಾತಿಗೆ ಮರುಳಾಗಿ ಮೋಸ ಹೋಗುತ್ತಿರುತ್ತಾರೆ. ಪೊಲೀಸರು ಈ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೀಗ ಅಂತಹದ್ದೆ ಒಂದು ಪ್ರಕರಣದಲ್ಲಿ ವ್ಯಕ್ತಿಯೋರ್ವ ಸುಮಾರು 700 ಯುವತಿಯರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಖಾಸಗಿ ಕಂಪನಿಯಲ್ಲಿ ರಿಕ್ರೂಟರ್ ಆಗಿ ಕೆಲಸ ಮಾಡುತ್ತಿರುವ ತುಷಾರ್ ಸಿಂಗ್ ಬಿಶ್ತ್ ಎಂಬ ವ್ಯಕ್ತಿಯು ಆನ್ಲೈನ್ ಡೇಟಿಂಗ್ ಆ್ಯಪ್, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು 700 ಯುವತಿಯರಿಗೆ ಬ್ಲ್ಯಾಕ್ಮೇಲ್ ಮಾಡಿ ಹಣ ಸುಲಿಗೆ ಮಾಡಿದ್ದು, ದೆಹಲಿ ಸೈಬರ್ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ.
ಪ್ರಕರಣದ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಬಿಬಿಎ ಪದವದರನಾಗಿರುವ ತುಷಾರ್ ದೆಹಲಿ ಮೂಲದವನಾಗಿದ್ದು, ನೊಯ್ಡಾದ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲಸ ಮುಗಿದ ಬಳಿಕ ರಾತ್ರಿ ವೇಳೆ ಆ್ಯಪ್ಮೂಲಕ ತರಿಸಿಕೊಂಡಿದ್ದ ಅಂತಾರಾಷ್ಟ್ರೀಯ ಮೊಬೈಲ್ ಮೂಲಕ ನಕಲಿ ಐಡಿಗಳನ್ನು ಕ್ರಿಯೇಟ್ ಮಾಡಿ ಯುವತಿಯರಿಗೆ ತಾನು ಯುಎಸ್ ಮೂಲದ ಮಾಡೆಲ್ (Model) ಎಂದು ಪರಿಚಯಿಸಿಕೊಂಡು ಅವರ ಜೊತೆ ಸ್ನೇಹ ಬೆಳೆಸುತ್ತಿದ್ದ.
ಆ ಬಳಿಕ ಆತ ಅವರೊಂದಿಗೆ ಸಲುಗೆಯಿಂದ ಮಾತನಾಡಿ ಅವರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ವಾಟ್ಸ್ಆ್ಯಪ್ ಮುಖೇನ ಕಳಿಸಿಕೊಂಡು ನಂತರ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ದೆಹಲಿ ಯೂನಿವರ್ಸಿಟಿ ವಿದ್ಯಾರ್ಥಿನಿಯೊಬ್ಬಳು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ಈತ 18-30 ವರ್ಷದ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಬಳಿಕ ಎಸಿಪಿ ಅರವಿಂದ್ ಯಾದವ್ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ನಡೆಸಿದಾಗ ಆರೋಪಿಯು 700 ಮಂದಿಗೆ ಇದೇ ರೀತಿ ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು, ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತನಿಂದ 13 ಕ್ರೆಡಿಟ್ ಕಾರ್ಡ್, ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.