

ಮುಂಬೈ: ಜನಪ್ರಿಯ ಗಾಯಕ ಅರ್ಮಾನ್ ಮಲಿಕ್ ಮತ್ತು ಫ್ಯಾಷನ್ ಇನ್ಫ್ಲುಯೆನ್ಸರ್ ಆಶ್ನಾ ಶ್ರಾಫ್ ಡೇಟಿಂಗ್ ಸುದ್ದಿ ಬಹಳ ಸಮಯದಿಂದ ಸುದ್ದಿಯಲ್ಲಿತ್ತು. ಇದೀಗ ಅರ್ಮಾನ್ ಮಲಿಕ್ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಶೇಷ ಸಂದರ್ಭದ ಫೋಟೋಗಳನ್ನು ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟೈಗರ್ ಶ್ರಾಫ್, ತಾರಾ ಸುತಾರಿಯಾ, ಜರೀನ್ ಖಾನ್, ರಿಯಾ ಚಕ್ರವರ್ತಿ, ಇಶಾನ್ ಖಟ್ಟರ್ ಮುಂತಾದ ಸೆಲೆಬ್ರಿಟಿಗಳು ಫೋಟೋಗೆ ಕಾಮೆಂಟ್ ಮಾಡಿದ್ದಾರೆ.
ಇಂದು ಅರ್ಮಾನ್ ಮಲಿಕ್ ತಮ್ಮ ನಿಶ್ಚಿತಾರ್ಥದ ಸುಂದರವಾದ ಚಿತ್ರಗಳನ್ನು ತಮ್ಮ ಇನ್ಸ್ಟಾ ಪೇಜ್ನಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಆಫ್-ವೈಟ್ ಸೂಟ್ ಧರಿಸಿರುವ ಅರ್ಮಾನ್, ಮಂಡಿಯೂರಿ ಕುಳಿತು ಆಶ್ನಾ ಅವರ ಬೆರಳಿಗೆ ಉಂಗುರವನ್ನು ಹಾಕುತ್ತಿದ್ದಾರೆ. ಇದರಲ್ಲಿ ಆಶ್ನಾ ಸಂತೋಷಕ್ಕೆ ಪಾರವೇ ಇಲ್ಲ. ಇನ್ನು ಆಶ್ನಾ ಅವರು ಕೆಂಪು ಹೂವಿನ ಪ್ರಿಂಟ್ ಇರುವ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ರೋಮ್ಯಾಂಟಿಕ್ ಫೋಟೋಗಳನ್ನು ನೋಡಿದ ಅರ್ಮಾನ್ ಮಲಿಕ್ ಅವರ ಎಲ್ಲಾ ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಅವರಿಗೆ ವಿಶ್ ಮಾಡುತ್ತಿದ್ದಾರೆ.
ಅರ್ಮಾನ್ ಮಲಿಕ್ ಬಹಳ ಜನಪ್ರಿಯ ಗಾಯಕ. ಕನ್ನಡದಲ್ಲಿ ಅವರು 'ಸರಿಯಾಗಿ ನೆನಪಿದೆ ನನಗೆ..', 'ಒಂದು ಮಳೆಬಿಲ್ಲು...', ಹಿಂದಿಯಲ್ಲಿ 'ಬೋಲ್ ದೋ ನಾ ಜರಾ', 'ವಜಾ ತುಮ್ ಹೋ', 'ಕೌನ್ ತುಜೆ', 'ಜೈ ಹೋ' ಮತ್ತು 'ನೈನಾ' ನಂತಹ ಅನೇಕ ಚಾರ್ಟ್‌ಬಸ್ಟರ್ ಹಾಡುಗಳನ್ನು ಹಾಡಿದ್ದಾರೆ. ಆಶ್ನಾ ಶ್ರಾಫ್ ಜನಪ್ರಿಯ ಫ್ಯಾಷನ್, ಟ್ರಾವೆಲ್ ಬ್ಲಾಗರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಇನ್ಫ್ಲುಯೆನ್ಸರ್ ಆಗಿದ್ದಾರೆ. ಜನರು ಅವರ ಸ್ಟೈಲ್ ಅನ್ನು ತುಂಬಾ ಇಷ್ಟಪಡುತ್ತಾರೆ. ಸುಮಾರು 1 ಮಿಲಿಯನ್ ಜನರು ಆಶ್ನಾ ಅವರನ್ನು ಫಾಲೋ ಮಾಡುತ್ತಾರೆ.