

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜಭವನ ಮತ್ತು ಸರ್ಕಾರದ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಹತ್ತು ವರ್ಷದಷ್ಟು ಹಳೆಯದಾದ ಅರ್ಕಾವತಿ ಬಡಾವಣೆಯ ರೀ ಡು ಸಂಬಂಧಿಸಿದ ನ್ಯಾ. ಕೆಂಪಣ್ಣ ಆಯೋಗದ ವರದಿಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋಥ್ ಕೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ನೀಡಿರುವ ಅನುಮತಿ ವಿಷಯ ಹೈಕೋರ್ಟ್ ಮೆಟ್ಟಿಲೇರಿ ವಾದ- ಪ್ರತಿವಾದ ಮುಗಿದು, ತೀರ್ಪು ಹೊರ ಬರ ಬೇಕಾಗಿದೆ. ಅದಕ್ಕೂ ಮೊದಲೇ ಸಿದ್ದರಾಮಯ್ಯ ಸರ್ಕಾ ರದ ಮೊದಲ ಅವಧಿಯಲ್ಲಿ ನಡೆದಿದ್ದ ರೀಡು ಪ್ರಕರಣದತ್ತ ಗೌರ್ನರ್ ದೃಷ್ಟಿ ಹರಿಸಿರುವುದು ಕುತೂಹಲ ಮೂಡಿಸಿದೆ.
ಅರ್ಕಾವತಿ ಬಡಾವಣೆಗಾಗಿ ಸ್ವಾಧೀನ ಮಾಡಿದ್ದ ಭೂಮಿಯಲ್ಲಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಸೂಚನೆಯಂತೆ 2014ರಲ್ಲಿ ಡಿನೋಟಿಫಿಕೇಷನ್ ಮಾಡಲಾಗಿತ್ತು. 472.25 ಎಕರೆ ಬದಲು ಹೆಚ್ಚುವರಿಯಾಗಿ 119 ಎಕರೆ ಸೇರಿಸಿ 541.25 ಎಕರೆ ಕೈ ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನ್ಯಾ. ಎಚ್.ಎಸ್. ಕೆಂಪಣ್ಣ ಆಯೋಗವನ್ನು 2015ರಲ್ಲಿ ಸಿದ್ದರಾಮಯ್ಯ ಸರ್ಕಾರ ರಚನೆ ಮಾಡಿತ್ತು. ಇತ್ತೀಚೆಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಷನ್ನಲ್ಲಿ 8 ಸಾವಿರ ಕೋಟಿ ರೂ.ಗಳಷ್ಟು ಅಕ್ರಮವಾಗಿದೆ ಎಂಬ ಆರೋಪ ಮಾಡಿದ್ದರು. ಇದೀಗ ರಾಜಭವನದಿಂದ ಈ ಬಗ್ಗೆ ಮಾಹಿತಿ ಕೋರಲಾಗಿದೆ.
ಸಿದ್ಧವಾಗಿದೆ ವರದಿ: ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ವಿವರವಾದ ವರದಿ ಸಿದ್ಧಪಡಿಸಿದ್ದು ಅದನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಗೆ ತಲುಪಿಸಿದ್ದಾರೆ. ಶಿವಕುಮಾರ್ ವರದಿಯನ್ನು ಪರಿಶೀಲನೆ ಮಾಡಿದ ನಂತರ ರಾಜಭವನಕ್ಕೆ ರವಾನಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರಾದ ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಸಂತೋಷ್ ಲಾಡ್ ಅವರು ಗಂಗೇನಹಳ್ಳಿ ಡಿ ನೋಟಿಫಿಕೇಷನ್ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ ಬಳಿಕ ಈ ವಿದ್ಯಮಾನ ನಡೆದಿದೆ. ಆದರೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸೆ.11 ರಂದೇ ಡಿಸಿಎಂ ಕಚೇರಿಗೆ ದಾಖಲೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅರ್ಕಾವತಿ ಬಡಾವಣೆಯ ಅಂತಿಮ ಅಧಿಸೂಚನೆಯಿಂದ ಹೊರಗಿಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 2006, 2007, 2011 ಮತ್ತು 2013 ರಲ್ಲಿ ಅಂಗೀಕರಿಸಲಾದ ವಿವಿಧ ನಿರ್ಣಯಗಳು ಕಾನೂನುಬದ್ಧವಾಗಿವೆಯೇ? 2014ರ ಜೂನ್ 18ರಂದು ಗೆಜೆಟ್ ಹೊರಡಿಸಲಾದ ಅರ್ಕಾವತಿ ಬಡಾವಣೆಯ ಮರು-ಮಾರ್ಪಡಿಸಿದ ಯೋಜನೆಯು ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿದೆಯೇ ಎಂಬುದರ ತನಿಖೆಯನ್ನು ಮಾಡಲು ಆಯೋಗ ರಚನೆಯಾಗಿತ್ತು.
ಸಿದ್ದರಾಮಯ್ಯ ಮೊದಲ ಅವಧಿಯ ಸರ್ಕಾರ ಡಿನೋಟಿಫಿಕೇಷನ್ ಹೆಸರಿನಲ್ಲಿ ಅಕ್ರಮ ಎಸಗಿದೆ ಎಂದು ಆಗಿನ ಪ್ರತಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿತ್ತು. ಸದನದಲ್ಲಿಯೂ ಹೋರಾಟ ನಡೆಸಿತ್ತು. ಅರ್ಕಾವತಿ ಬಡಾವಣೆ ನಿರ್ವಣಕ್ಕೆ 2001ರಲ್ಲಿ ಆಗಿನ ಎಸ್.ಎಂ. ಕೃಷ್ಣ ಸರ್ಕಾರ ಯೋಜನೆ ರೂಪಿಸಿತ್ತು. ಭೂಮಿ ಸ್ವಾದೀನ ಹಾಗೂ ಕೈಬಿಟ್ಟಿರುವ ಪ್ರಕರಣಗಳಲ್ಲಿ ಅಕ್ರಮಗಳಾಗಿರುವುದರಿಂದ ತನಿಖೆ ನಡೆಸಬೇಕೆಂದು ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರಕ್ಕೆ ಒತ್ತಾಯಿಸಿದ್ದರು. ಸಿದ್ದರಾಮಯ್ಯ ಅವರು ಸಹ ಡಿ ನೋಟಿಫಿಕೇಷನ್ ಮಾಡಿದ್ದಾರೆ ಎಂಬ ಆರೋಪ ಬಂದಿದ್ದರಿಂದ ತನಿಖೆಗೆ ನ್ಯಾ. ಕೆಂಪಣ್ಣ ಆಯೋಗ ರಚನೆಯಾಗಿತ್ತು. ನ್ಯಾಯಾಲಯದ ಸೂಚನೆಯಂತೆ ರೀ ಡು ಮಾಡಲಾಗಿದೆ ಎಂದು ಆಯೋಗ ತನ್ನ 1861 ಪುಟಗಳ ವರದಿಯಲ್ಲಿ ಕ್ಲೀನ್ಚಿಟ್ ನೀಡಲಾಗಿತ್ತು ಎಂಬ ಮಾಹಿತಿ ಆಯೋಗದ ವರದಿ ಸಲ್ಲಿಕೆಯಾದಾಗ ಲಭ್ಯವಾಗಿತ್ತು. ಕೆಂಪಣ್ಣ ಆಯೋಗ 2017 ಆಗಸ್ಟ್ 23 ರಂದು ವರದಿ ಸಲ್ಲಿಸಿತ್ತು. ಆಗಿನ ಸಿದ್ದರಾಮಯ್ಯ ಸರ್ಕಾರ ಸಹ ನ್ಯಾಯಾಲಯದ ತೀರ್ಪಿನಂತೆ ರೀ ಡು ಮಾಡಿರುವುದಾಗಿಯೇ ಸ್ಪಷ್ಟಪಡಿಸಿತ್ತು. ಆದರೆ 868.27 ಎಕರೆ ಡಿನೋಟಿಫಿಕೇಷನ್ ಆಗಿದೆ ಎಂಬುದು ಸಿ.ಟಿ. ರವಿ ಇತ್ತೀಚೆಗೆ ಮಾಡಿದ ಆರೋಪವಾಗಿದೆ.
ವಿಧಾನಮಂಡಲದಲ್ಲಿ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ ಮಾಡಿದಾಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕೆಂಪಣ್ಣ ಆಯೋಗದ ವರದಿಯ ಕೆಲ ಅಂಶಗಳನ್ನು ಪ್ರಸ್ತಾಪಿಸಿದ್ದರು.
ಅರ್ಕಾವತಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ನಿವೃತ್ತ ನ್ಯಾ. ಎಚ್ ಎಸ್ ಕೆಂಪಣ್ಣ ನೇತೃತ್ವದ ಏಕಸದಸ್ಯ ಆಯೋಗವು ಸಲ್ಲಿಸಿರುವ ವರದಿ ವಿಧಾನ ಮಂಡಲದಲ್ಲಿ ಇದುವರೆಗೂ ಮಂಡನೆಯಾಗಿಲ್ಲ. ಈ ಹಿಂದೆ ಹೈಕೋರ್ಟ್ನಲ್ಲಿ ಬೆಂಗಳೂರಿನ ಸಾರ್ವಜನಿಕ ಹೊಣೆಗಾರಿಕೆ ಸಮಿತಿ (ಸಿಪಿಸಿ) ಪಿಐಎಲ್ ಸಲ್ಲಿಸಿತ್ತು.