ಆ ನಕಾರಾತ್ಮಕ ಆಲೋಚನೆಗಳಿಂದ ಹೊರಬರಲು ಸಾಧ್ಯವಾಗಲಿಲ್ಲ; ಅರ್ಜುನ್​ ಕಪೂರ್ ಹೀಗೆಳಿದ್ದೇಕೆ | Arjun Kapoor

Untitled design - 2024-11-13T155857.877
Published on

ಮುಂಬೈ: ಬಾಲಿವುಡ್​ ನಟ ಅರ್ಜುನ್ ಕಪೂರ್(Arjun Kapoor) ಅವರು ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಮ್ ಎಗೇನ್’ ಸಿನಿಮಾದಲ್ಲಿ ಖಳನಾಯಕ ಲಂಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸು ಅರ್ಜುನ್ ಜೀವನದಲ್ಲಿ ಅನೇಕ ನಕಾರಾತ್ಮಕ ಹಂತಗಳ ನಂತರ ಬಂದಿದೆ. ಇದನ್ನು ಸ್ವತಃ ಅರ್ಜುನ್​ ಕಪೂರ್​ ಅವರೆ ಬಹಿರಂಗಪಡಿಸಿದ್ದಾರೆ.

ಅರ್ಜುನ್ ಸಿನಿಮಾ ನೋಡುವುದನ್ನೂ ನಿಲ್ಲಿಸಿದ ಕಾಲವೊಂದಿತ್ತು. ಅರ್ಜುನ್ ಜತೆ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಇತರ ನಟರು ಉದ್ಯಮದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಿದ್ದರು. ಅಂತಹ ಸಮಯದಲ್ಲಿ ನನಗೇಕೆ ಇಂತಹ ಆಫರ್‌ಗಳು ಬರುತ್ತಿಲ್ಲ ಎಂದು ಆಶ್ಚರ್ಯ ಪಡುತ್ತಿದ್ದೆ ಎಂದು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಅರ್ಜುನ್​​ ಕಪೂರ್​​ ತಮ್ಮ ವೃತ್ತಿಜೀವನದ ಆ ಕಷ್ಟದ ಅವಧಿಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದು ರಾತ್ರೋರಾತ್ರಿ ನಡೆದದ್ದಲ್ಲ. ಒಂದು ಸಮಯದಲ್ಲಿ ನನಗೆ ಸಿನಿಮಾವೊಂದನ್ನು ಪೂರ್ತಿಯಾಗಿ ನೋಡುವ ಆಸೆಯೂ ಇರಲಿಲ್ಲ. ಐದರಿಂದ ಹತ್ತು ನಿಮಿಷ ಸಿನಿಮಾ ನೋಡಿ ಆಮೇಲೆ ನನಗೆ ಇಂಥಾ ಆಫರ್​​ಗಳು ಯಾವಾಗ ಬರುತ್ತವೆ ಎಂದು ಯೋಚಿಸುತ್ತಿದ್ದೆ. ಬೇರೆಯವರ ಕೆಲಸವನ್ನು ನೋಡಿ ಅವರ ಒಳ್ಳೆಯ ಕೆಲಸಕ್ಕಾಗಿ ಇತರರನ್ನು ಮುಕ್ತವಾಗಿ ಹೊಗಳುವವರ ವ್ಯಕ್ತಿಗಳಲ್ಲಿ ನಾನೂ ಒಬ್ಬ. ಆದರೆ ಯಾರ ಅಭಿನಯದಲ್ಲೂ ನನಗೆ ಒಳ್ಳೆಯದೇನೂ ಕಾಣದ ಕಾಲವೊಂದಿತ್ತು. ನಾನು ಯಾಕೆ ಈ ರೀತಿ ಮಾಡಬಾರದು? ಅಂತಹ ಉದ್ಯೋಗಾವಕಾಶ ನನಗೆ ಏಕೆ ಸಿಗುತ್ತಿಲ್ಲ? ನಾನು ಸುಮ್ಮನೆ ಯೋಚಿಸುತ್ತಿದ್ದೆ ಎಂದು ಹೇಳಿದ್ದಾರೆ.

ನಾನು ಇತರರೊಂದಿಗೆ ನನ್ನನ್ನು ಹೋಲಿಸಿಕೊಳ್ಳುವುದಿಲ್ಲ. ನನಗೇಕೆ ಒಳ್ಳೆಯ ಪಾತ್ರಗಳ ಅವಕಾಶ ಸಿಗುತ್ತಿಲ್ಲ ಎಂದು ಆಲೋಚಿಸಿ ಚಲನಚಿತ್ರವನ್ನು ನೋಡಲು ಇಷ್ಟಪಡುತ್ತಿರಲಿಲ್ಲ. ನನ್ನ ವೈಯಕ್ತಿಕ ಜೀವನಕ್ಕೆ ಇದು ಅಡ್ಡಿಯಾಗುತ್ತಿತ್ತು. ರಾತ್ರಿ ಒಂದೋ ಎರಡೋ ಸಿನಿಮಾ ನೋಡಿ ನಿದ್ದೆಗೆ ಜಾರುತ್ತಿದ್ದೆ. ಆದರೆ ಈ ನಕಾರಾತ್ಮಕತೆಯಿಂದಾಗಿ ನಾನು 2022ರ ಅಂತ್ಯದ ವೇಳೆಗೆ ಸಿನಿಮಾಗಳು ಮತ್ತು ಸರಣಿಗಳನ್ನು ನೋಡುವುದನ್ನು ನಿಲ್ಲಿಸಿದೆ. ಸಿನಿಮಾಗಳನ್ನು ನೋಡಿ ನಾನು ಆನಂದಿಸುತ್ತಿರಲಿಲ್ಲ. ಯೂಟ್ಯೂಬ್ ಶಾಟ್‌ಗಳು ಮತ್ತು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ನೋಡುತ್ತಾ ಮಲಗುತ್ತಿದ್ದೆ. ನನ್ನ ಸ್ವಂತ ನಕಾರಾತ್ಮಕ ಆಲೋಚನೆಗಳಿಂದ ಹೊರಬರಲು ನನಗೆ ಸಾಧ್ಯವಾಗಲಿಲ್ಲ. ನಾನು ತುಂಬಾ ಯೋಚಿಸಲು ಪ್ರಾರಂಭಿಸಿದೆ ಎಂದು ತಿಳಿಸಿದರು.

ಕೊನೆಗೆ ಚಿಕಿತ್ಸೆಯ ಮೂಲಕ ಮತ್ತೆ ತನ್ನನ್ನು ತಾನು ಪ್ರೀತಿಸಬೇಕು ಎಂದು ಅರಿತುಕೊಂಡಿದ್ದಾಗಿ ಅರ್ಜುನ್​ ಹೇಳಿದ್ದಾರೆ. ಕೆಲವೊಮ್ಮೆ ನಿಮ್ಮ ಪ್ರಶ್ನೆಗಳಿಗೆ ಉತ್ತರಗಳು ಹೊರಗೆ ಸಿಗುವುದಿಲ್ಲ, ಅವು ನಿಮ್ಮೊಳಗೆ ಇರುತ್ತವೆ. ನನಗೂ ನನ್ನ ಪ್ರಶ್ನೆಗಳಿಗೆ ನನ್ನೊಳಗೇ ಉತ್ತರ ಕಂಡುಕೊಳ್ಳಬೇಕೆಂದಿದ್ದೆ. ನನ್ನ ವೈಯಕ್ತಿಕ ಗೊಂದಲದಿಂದಾಗಿ ನಾನು ವಿಶ್ವಾಸದ್ರೋಹಿಯಾಗಿದ್ದೆ. ‘ಸಿಂಗಮ್​​ ಎಗೇನ್​​’ ಸಿನಿಮಾ ನನ್ನ ಜೀವನದ ಆ ಕಷ್ಟದ ಅವಧಿಯಿಂದ ಹೊರಬರಲು ಸಾಕಷ್ಟು ಸಹಾಯ ಮಾಡಿತು. ನಾನು ಚಿತ್ರದ ಸೆಟ್‌ಗಳಲ್ಲಿ ಮನೆಯಂತಹ ವಾತಾವರಣವನ್ನು ಅನುಭವಿಸಲು ಪ್ರಾರಂಭಿಸಿದೆ. ನನಗೆ ಕೆಲಸ ಸಿಗದ ಸಮಯದಲ್ಲಿ ರೋಹಿತ್ ಸರ್ ನನಗೆ ಈ ಅವಕಾಶವನ್ನು ನೀಡಿದರು. ಸಿಂಗಮ್​​​ ಎಗೇನ್​ ಸಿನಿಮಾದಲ್ಲಿ ವಿಲನ್​ ಆಗಿ ನಟಿಸಲು ನನಗೆ ಬಹಳ ಖುಷಿಯಾಯಿತು ಎಂದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net