ಅರ್ಹರಿಗೆ ಹಕ್ಕು ಪತ್ರ ನೀಡಲು ಒತ್ತಾಯ

25ckm3- vijay kumar
Published on

ಚಿಕ್ಕಮಗಳೂರು: ಉಳ್ಳವರಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು, ಅರ್ಹರಿಗೆ ಹಕ್ಕುಪತ್ರ ನೀಡಬೇಕು ಎಂದು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯ್ ಕುಮಾರ್ ಒತ್ತಾಯಿಸಿದರು.
ಸಣ್ಣ ಪುಟ್ಟ ರೈತರು ಜೀವನಕ್ಕಾಗಿ ಸಣ್ಣ ಪ್ರಮಾಣದ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಆರ್ಥಿಕ ಮತ್ತು ರಾಜಕೀಯವಾಗಿ ಅಸಹಾಯಕತೆಯಿಂದ ಇನ್ನೂ ಹಕ್ಕುಪತ್ರ ಪಡೆಯಲು ಸಾಧ್ಯವಾಗಿಲ್ಲ. ಅರ್ಹರಿಗೆ ಕೂಡಲೇ ಹಕ್ಕುಪತ್ರ ನೀಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಣ್ಣ ಪುಟ್ಟ ರೈತರು ತಮ್ಮ ಜೀವನೋಪಾಯಕ್ಕಾಗಿ 1ರಿಂದ 5 ಎಕರೆ ಜಮೀನು ಸಾಗುವಳಿ ಮಾಡಿಕೊಂಡು, ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದು, ಕಾನೂನು ಬದ್ಧವಾಗಿ ಹಕ್ಕುಪತ್ರ ನೀಡಲಾಗಿದೆ. ಕೆಲವರು ಅರ್ಜಿ ಸಲ್ಲಿಸಿಕೊಂಡು ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಕಾನೂನು ಬದ್ಧವಾಗಿ ನೀಡಿರುವ ಹಕ್ಕುಪತ್ರದಾರರಿಗೆ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದರು.
ನಮೂನೆ 50, 53 ಮತ್ತು 57ರಡಿಯಲ್ಲಿ ನ್ಯಾಯ ಬದ್ಧವಾಗಿ ಹಕ್ಕುಪತ್ರ ಪಡೆದ ಯಾವ ರೈತರಿಗೂ ಅನ್ಯಾಯವಾಗಬಾರದು. ನ್ಯಾಯಬದ್ದವಾಗಿ ಅರ್ಜಿ ಸಲ್ಲಿಸಿದವರಿಗೆ ಭೂಮಿ ಸಕ್ರಮ ಮಾಡಿಕೊಡಬೇಕು. ಸರ್ಕಾರದ ಮಾನದಂಡ ಮೀರಿ ಭೂಮಿ ಇದ್ದರೂ ಆಸೆಗಾಗಿ ಅರ್ಜಿ ಸಲ್ಲಿಸಿ ಹಕ್ಕುಪತ್ರ ಪಡೆದಿದ್ದರೆ ಅಂತಹ ಪ್ರಕರಣಗಳನ್ನು ತನಿಖೆ ನಡೆಸಿ ಮಂಜೂರಾತಿ ವಜಾ ಮಾಡಬೇಕು ಎಂದು ತಿಳಿಸಿದರು.
ಇತ್ತೀಚೆಗೆ ಕಡೂರು ಮತ್ತು ಮೂಡಿಗೆರೆಯಲ್ಲಿ ಕಂದಾಯ ಅಧಿಕಾರಿಗಳು ಸೆಕ್ಷನ್ 4(1) ಮತ್ತು ಇತರೆ ಭೂಮಿ ಅಕ್ರಮ ಮಾಡಿದ್ದಾರೆ ಎಂಬ ತನಿಖೆ ಹಿನ್ನೆಲೆ ನೈಜ ರೈತರಿಗೆ ಅನ್ಯಾಯವಾಗುವ ಆತಂಕ ಎದುರಾಗಿದೆ. ಎಮ್ಮೆದೊಡ್ಡಿ ಭಾಗದಲ್ಲಿ 50-60 ಕುಟುಂಬಗಳು 80ಕ್ಕೂ ಹೆಚ್ಚು ವರ್ಷದಿಂದ ಭೂಮಿ ಸಾಗುವಳಿ ಮಾಡಿಕೊಂಡು ಬದುಕುತ್ತಿದ್ದಾರೆ. ಅಲ್ಲಿ ಸೆಕ್ಷನ್ 4(1) ಆಗಿದೆ ಎಂಬ ಕಾರಣಕ್ಕೆ ಅವರಿಗೆ ಭೂಮಿ ಹಕ್ಕುಪತ್ರ ನಿರಾಕರಿಸಬಾರದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net