

| ಕೆ.ಸತೀಶ್ ಮೈದೊಳಲು ಹೊಳೆಹೊನ್ನೂರು
ಎರಡು ವರ್ಷಗಳ ನಂತರ ಕೈ ವ್ಯಾಪಾರದಲ್ಲಿ ಅಡಕೆ ಬೆಲೆ ಕ್ವಿಂಟಾಲ್ಗೆ 50 ಸಾವಿರ ರೂ. ಗಡಿ ತಲುಪಿದ್ದು, ಈ ಬಾರಿ ಬೆಳೆಗಾರರ ಆದಾಯ ಹೆಚ್ಚುವ ನಿರೀಕ್ಷೆ ಹೊಂದಲಾಗಿದೆ. ವರ್ತಕರು ಅಡಕೆ ಬೆಳೆಗಾರರ ಮನೆಗೆ ಹೋಗಿ ಕ್ವಿಂಟಾಲ್ ಹಳೆಯ ರಾಶಿ ಅಡಕೆಯನ್ನು 48 ಸಾವಿರ ರೂ.ಗೆ ಖರೀದಿಸುತ್ತಿದ್ದಾರೆ. ಹೊಸ ರಾಶಿ ಅಡಕೆಯನ್ನು 44,200 ರೂ.ನಂತೆ ಖರೀದಿಸಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಕಳೆದೆರಡು ದಿನಗಳಿಂದ ಅಡಕೆ ವ್ಯಾಪಾರ ಹೆಚ್ಚಾಗಿದೆ.
ಆಮದು ಸುಂಕ ಹೆಚ್ಚಳ: ಅಡಕೆ ಮೇಲಿನ ಆಮದು ಸುಂಕವನ್ನು ಕೇಂದ್ರ 230 ರೂ.ನಿಂದ 320 ರೂ.ಗೆ ಹೆಚ್ಚಳ ಮಾಡಿದ್ದರಿಂದ ಆಮದು ಗಣನೀಯವಾಗಿ ಕುಸಿದಿದೆ. ಗಡಿಗಳಲ್ಲಿ ತಪಾಸಣೆ ಹೆಚ್ಚಾಗಿರುವುದರಿಂದ ಕಳಪೆ ಅಡಕೆ ಕಳ್ಳಸಾಗಣೆಗೂ ಕಡಿವಾಣ ಬಿದ್ದಿದೆ. ಇದರಿಂದ ಗುಟ್ಕಾ ಕಂಪನಿಗಳು ದೇಶೀಯ ಅಡಕೆಯನ್ನೇ ಆಶ್ರಯಿಸಬೇಕಾಗಿದೆ. ಇದು ಅಡಕೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಭಾವಿಗಳ ಕೈವಾಡ?: ಮತ್ತೊಂದೆಡೆ ಅಡಕೆ ಖರೀದಿದಾರರು ಖರೀದಿಸಿದ ನಂತರ ಮಾರುಕಟ್ಟೆಗೆ ತಲುಪಿಸದೆ ತಮ್ಮಲ್ಲೇ ಶೇಖರಿಸಿಟ್ಟುಕೊಳ್ಳುತ್ತಿ ರುವುದರಿಂದ ಮಾರುಕಟ್ಟೆಯಲ್ಲಿ ಅಡಕೆ ಅಭಾವ ಸೃಷ್ಟಿಯಾಗುವ ಭೀತಿಯೂ ಇದೆ. ಮಾರುಕಟ್ಟೆ ಮೆಲೆ ಹಿಡಿತ ಸಾಧಿಸಿರುವ ಕೆಲ ಪ್ರಭಾವಿ ವ್ಯಾಪಾರಿಗಳು ಕಳೆದೆರಡು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಅಡಕೆ ಖರೀದಿಸಿ ಸಂಗ್ರಹಿಸಿಟ್ಟಿದ್ದಾರೆ. ಅವುಗಳನ್ನು ಈಗ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅಡಕೆ ಅಭಾವ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆಂಬ ಮಾತುಗಳಿವೆ. ಹೀಗಾಗಿ ಸದ್ಯ ಇರುವ ಬೆಲೆ ಮುಂದಿನ ದಿನಗಳಲ್ಲಿ ಭಾರಿ ಕುಸಿತ ಕಾಣಲಿದೆ ಎಂಬುದು ಬೆಳೆಗಾರರ ಆತಂಕ. 2018-19ರಲ್ಲಿ 30 ಸಾವಿರ ರೂ. ಆಸುಪಾಸಿನಲ್ಲಿತ್ತು. ಕಳೆದ ವರ್ಷ 40 ಸಾವಿರ ರೂ. ಸನಿಹಕ್ಕೆ ಬಂದು ನಂತರ 30 ಸಾವಿರ ರೂ.ಗೆ ಕುಸಿದಿತ್ತು. ಇದೀಗ ರಾಶಿ ಅಡಕೆ ಕೈ ವ್ಯಾಪಾರ 48 ಸಾವಿರ ರೂ.ನಿಂದ 48,600 ರೂ.ಗೆ ತಲುಪಿದೆ. ಆಗಸ್ಟ್ ನಂತರ ಅಡಕೆ ಧಾರಣೆ ಕುಸಿತ ಕಾಣಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಅಡಕೆಯ ಆವಕ ಪ್ರಮಾಣ ಕಡಿಮೆ ಇರುವುದರಿಂದ ಬೆಲೆ ಹೆಚ್ಚಳವಾಗುವುದು ವಾಡಿಕೆ. ಅಡಕೆ ಟಾಸ್ಕ್ಫೋರ್ಸ್ ಹಾಗೂ ಸರ್ಕಾರ ಈಗಿರುವ ಬೆಲೆಯನ್ನೇ ಆಧರಿಸಿ ಅಡಕೆ ಖರೀದಿ ಬೆಲೆ ಸ್ಥಿರಗೊಳಿಸಬೇಕು.
| ವೀರೇಶ್ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ