ಪ್ಯಾಕೇಜ್ ಸಮಸ್ಯೆ ಎದುರಿಸುತ್ತಿದ್ದೀರಾ?: ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ

Published on

ಬೆಂಗಳೂರು:  ಬಿಬಿಎಂಪಿ ವ್ಯಾಪ್ತಿಯಲ್ಲಿನ ಘನ ತ್ಯಾಜ್ಯ ವಿಲೇವಾರಿ ಮಾಡುವುದಕ್ಕಿಂತಲೂ ಟೆಂಡರ್ ಕರೆಯುವ ಬಗ್ಗೆಯೇ ನಿಮಗೆ ಹೆಚ್ಚು ಆಸಕ್ತಿ ಇದ್ದಂತಿದೆ’ ಎಂದು ರಾಜ್ಯ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ’ಕಸ ವಿಲೇವಾರಿಯ ಪ್ಯಾಕೇಜ್ ಸಮಸ್ಯೆಯನ್ನು ಏನಾದರೂ ಎದುರಿಸುತ್ತಿದ್ದೀರಾ ಎಂದು ಕಟುವಾಗಿ ಪ್ರಶ್ನಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಪ್ರಸನ್ನ ಕುಮಾರ್ ವಾದ ಮಂಡಿಸಿ, ಸರ್ಕಾರ ಈ ಮೊದಲು ಇದೇ ನ್ಯಾಯಪೀಠಕ್ಕೆ ನೀಡಿದ್ದ ಮುಚ್ಚಳಿಕೆಯನ್ನು ಉಲ್ಲಂಘಿಸಿದೆ ಮತ್ತು ಹೊಸ ಟೆಂಡರ್ ಕರೆಯುವ ಮೂಲಕ ನ್ಯಾಯಾಂಗ ನಿಂದನೆಗೆ ಗುರಿಯಾಗಿದೆ ಎಂದು ಆರೋಪಿಸಿದರು.

ಇದನ್ನು ಬಲವಾಗಿ ಅಲ್ಲಗಳೆದ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ, ’ಅರ್ಜಿದಾರರು ನ್ಯಾಯಾಲಯದ ದಿಕ್ಕು ತಪ್ಪಿಸುತ್ತಿದ್ದಾರೆ ಮತ್ತು ಈ ಹಿಂದಿನ ಹಾಗೂ 2025ರ ಮೇ 28ರಂದು ಕರೆದಿರುವ ಟೆಂಡರ್‌ಗಳು ಒಂದಕ್ಕೊಂದು ಭಿನ್ನವಾಗಿವೆ. ಇವೆರಡನ್ನೂ ಪರಸ್ಪರ ತುಲನೆ ಮಾಡುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ’ಸರ್ಕಾರಕ್ಕೆ ಬೆಂಗಳೂರಿನ ಕಸ ವಿಲೇವಾರಿಗಿಂತಲೂ ಹೆಚ್ಚಾಗಿ ಟೆಂಡರ್ ಕರೆಯುವ ಬಗ್ಗೆಯೇ ಉತ್ಸುಕತೆ ಇದ್ದಂತಿದೆ. ಅಷ್ಟೇ ಅಲ್ಲ, ಟೆಂಡರ್ ಕರೆದ ನಂತರ ಕಸ ವಿಲೇವಾರಿಗೆ ಜಾಗ ಹುಡುಕುತ್ತಿರುವಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net