ಅಕ್ರಮ ಆರೋಪ ಹೊತ್ತವರಿಗೆ ಪ್ರಭಾರ ಹೊಣೆ?

klr cmc
ಕೋಲಾರ ನಗರಸಭೆ ಕಚೇರಿ
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಕೋಲಾರ ನಗರಸಭೆಯಲ್ಲಿ ಅಕ್ರಮ ಖಾತೆಗಳಿಗೆ ಇ-&ಸ್ವತ್ತು ನೀಡಿರುವ ಆರೋಪ ಎದುರಿಸುತ್ತಿರುವ ಅಧಿಕಾರಿಗೆ ಆಯುಕ್ತ ಹುದ್ದೆಯ ಪ್ರಭಾರ ಹೊಣೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

2022ರ ಜನವರಿ 1ರಿಂದ ಜು.30ರ ವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಆಸ್ತಿಗಳಿಗೆ ಅಂದಿನ ಪೌರಾಯುಕ್ತ ಪ್ರಸಾದ್​ ಅವಧಿಯಲ್ಲಿ ಇ&-ಸ್ವತ್ತು ನೀಡಲಾಗಿದೆ. ಅವುಗಳ ಪೈಕಿ ಅನಧಿಕೃತ, ಅಗ್ರಿಮೆಂಟ್​ ನಿವೇಶನಗಳಿಗೆ ನಿಯಮ ಗಾಳಿಗೆ ತೂರಿ ಇ&-ಸ್ವತ್ತು ನೀಡಲಾಗಿದೆ ಎಂದು ಆರೋಪಿಸಿ ಕೆಲ ಸದಸ್ಯರು ಡಿಸಿ, ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು.

ಅದರಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೂರನ್ನು ಗಂಭೀರವಾಗಿ ಪರಿಗಣಿಸಿ, ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರ ನಡುವೆ ಆರೋಪ ಹೊತ್ತಿರುವ ಅಧಿಕಾರಿಗೆ ಜಿಲ್ಲಾಧಿಕಾರಿ ನಗರಸಭೆಯ ಪೌರಾಯುಕ್ತರಾಗಿ ಪ್ರಭಾರ ವಹಿಸಿ ಆದೇಶಿಸಿರುವುದು ದೂರುದಾರ ಸದಸ್ಯರ ಆಕ್ರೋಶಕ್ಕೆ ಕಾಣರವಾಗಿದೆ.

ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ

ಅಕ್ರಮ ಖಾತೆಗಳ ವಿಚಾರವು 2022ರಲ್ಲಿ ಸದ್ದು ಮಾಡುತ್ತಿದ್ದಂತೆ ಸರ್ಕಾರವು ಪ್ರಸಾದ್​ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿತ್ತು. ಅವರ ಜಾಗಕ್ಕೆ ಸುಮಾ ನಿಯೋಜನೆಗೊಂಡರು, ತದನಂತರ ಶಿವಾನಂದ, ಅವರ ನಂತರ ಬಂದ ಯೋಜನಾ ನಿರ್ದೇಶಕಿ ಅಂಬಿಕಾ ಅವರಿಗೆ ಪ್ರಭಾರ ಅಧಿಕಾರಿಯಾಗಿದ್ದರು. ಇತ್ತೀಚೆಗೆ ಅಂಬಿಕಾ ಅವರ ಪ್ರಭಾರ ಅಧಿಕಾರ ರದ್ದುಗೊಳಿಸಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಸಾದ್​ ಅವರನ್ನು ನಿಯೋಜಿಸಿರುವುದರಿಂದ ಇ&ಸ್ವತ್ತು ವಿತರಣೆ ಪ್ರಕರಣ ಸಂಬಂಧದ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯಿದ್ದು, ನಿಯೋಜನೆ ರದ್ದುಗೊಳಿಸಬೇಕು ಎಂದು ಸದಸ್ಯರು ಒತ್ತಾಯಿಸಿದ್ದಾರೆ.

ಶಿವಾನಂದ ಅವರ ವರ್ಗಾವಣೆಯಿಂದ ಖಾಲಿಯಿರುವ ಹುದ್ದೆಗೆ ಕಾಯಂ ಪೌರಾಯುಕ್ತರ ಭರ್ತಿಯಾಗಿಲ್ಲ. ನಿಯಮಗಳ ಪ್ರಕಾರ ಎ ಗ್ರೇಡ್​ ಅಧಿಕಾರಿ ಹುದ್ದೆ ಖಾಲಿಯಾದರೆ ತಿಂಗಳಲ್ಲಿ ಭರ್ತಿಯಾಗಬೇಕು ಎಂಬ ಕಾನೂನಿದೆ. ಆದರೆ ಸರ್ಕಾರ ಕಾಯಂ ಪೌರಾಯುಕ್ತರನ್ನು ನೇಮಕ ಮಾಡಿಲ್ಲ. ಇದು ಇಲಾಖೆಯ ಪ್ರಗತಿಯ ಮೇಲೂ ಪರಿಣಾಮ ಬೀರುವುದಲ್ಲದೆ, ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ವಿಳಂಬವಾಗುತ್ತದೆ.

ಪೌರಾಯುಕ್ತರಾಗಿ ಕೆಎಎಸ್​ ಗ್ರೇಡ್​ ಅಧಿಕಾರಿ ನೇಮಕವಾಗಬೇಕು. ಕೋಲಾರ ನಗರಸಭೆಗೆ ಯಾವೊಬ್ಬ ಅಧಿಕಾರಿಯು ಬರಲು ಮುಂದಾಗುತ್ತಿಲ್ಲ. ನಜೀರ್​ ಎಂಬುವರು ಬರಲು ಸಿದ್ಧರಿದ್ದರೂ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗುತ್ತಿಲ್ಲ. ಜತೆಗೆ ಶ್ರೀಕಾಂತ್​ ಹಾಗೂ ಮಹಿಳಾ ಅಧಿಕಾರಿಯೊಬ್ಬರು ಪೌರಾಯುಕ್ತರಾಗಿ ಬರಲು ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗುತ್ತಿದೆ.

* ಏನಿದು ಪ್ರಕರಣ..?

2022ರ ಜನವರಿ 1ರಿಂದ ಜುಲೈ 30ರ ತನಕ 1,761 ಆಸ್ತಿಗಳಿಗೆ ಇ&-ಸ್ವತ್ತು ನೀಡಿರುವ ಬಗ್ಗೆ ಇ&-ತಂತ್ರಾಂಶದಲ್ಲಿ ದಾಖಲು ಮಾಡಲಾಗಿದೆ. ಆದರೆ, ಆ ಪೈಕಿ 949 ಕಡತಗಳು ಮಾತ್ರ ಲಭ್ಯವಾಗಿದ್ದು, ಅದರಲ್ಲೂ 48 ಆಸ್ತಿಗಳಿಗೆ ಅಕ್ರಮ ಖಾತೆ ನೀಡಿರುವುದು ಸಾಬೀತಾಗಿದೆ. ಉಳಿದ 812 ಕಡತಗಳು ನಾಪತ್ತೆ ಆಗಿವೆ. ಈ ಬಗ್ಗೆ ದೂರುಗಳು ಸಲ್ಲಿಕೆಯಾಗಿರುವುದರಿಂದ ತನಿಖೆಯೂ ಚಾಲ್ತಿಯಲ್ಲಿದ್ದು, ಪ್ರಸಾದ್​ಗೆ ಪ್ರಭಾರ ನೀಡಿರುವುದು ಅನುಮಾನ ಮೂಡಿಸಿದೆ.

* ಕಾಯಂ ಪೌರಾಯುಕ್ತರನ್ನು ನೇಮಿಸಿ

ಸರ್ಕಾರ ರಚನೆಯಾದ ನಂತರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಬೈರತಿ ಸುರೇಶ್​ ನಗರಾಭಿವೃದ್ಧಿ ಇಲಾಖೆ ಸಚಿವರಾಗಿದ್ದರೂ ಕೋಲಾರ ನಗರಸಭೆಯ ಪೌರಾಯುಕ್ತರ ಹುದ್ದೆಗೆ ಕಾಯಂ ಅಧಿಕಾರಿ ನಿಯೋಜನೆ ಮಾಡದಿರುವುದು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಯಂ ಅಧಿಕಾರಿ ಬಾರದೆ ಇರುವುದನ್ನು ಬಂಡವಾಳ ಮಾಡಿಕೊಂಡಿರುವ ಚುನಾಯಿತ ಮಂಡಳಿಯು ರಾಜಕೀಯ ಒತ್ತಡ ಹೇರಿ ಪ್ರಸಾದ್​ ಅವರನ್ನು ನಿಯೋಜನೆ ಹಾಕಿಸಿಕೊಳ್ಳುವ ಅವಶ್ಯ ಏನಿತ್ತು?, ಶಾಸಕರು, ಎಂಎಲ್ಸಿ, ಸಚಿವರ ಮೇಲೆ ಒತ್ತಡ ತಂದು ಕಾಯಂ ಅಧಿಕಾರಿಯನ್ನು ನೇಮಕ ಮಾಡಿಸಿಕೊಳ್ಳಬಹುದಿತ್ತಲ್ಲವೇ ಎಂದು ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.

ಕೋಟ್​..

ಸಾಕ್ಷ್ಯಗಳನ್ನು ನಾಶ ಪಡಿಸುವ ಕೆಲಸ ಏನೂ ಆಗುವುದಿಲ್ಲ. ಕೆಲಸ ಮಾಡುವ ಅಧಿಕಾರಿಯನ್ನು ಪ್ರಭಾರಿಯಾಗಿ ಹಾಕಿದ್ದು, ಶ್ರೀದಲ್ಲೇ ಕಾಯಂ ಆಯುಕ್ತರು ಬರಲಿದ್ದಾರೆ.

-ಲಕ್ಷ್ಮಿದೇವಮ್ಮ, ಅಧ್ಯಕ್ಷ್ಯೆ, ಕೋಲಾರ ನಗರಸಭೆ

ಕೋಟ್​...

ನಗರಸಭೆಯಲ್ಲಿ ಏನಾಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗುತ್ತಿಲ್ಲ. ಹಗರಣಗಳಲ್ಲಿ ಭಾಗಿಯಾಗಿರುವವರನ್ನೇ ಪ್ರಭಾರ ನೇಮಿಸಲಾಗಿದೆ ಎಂದರೆ ಏನರ್ಥ?.

- ಎಸ್​.ಆರ್​.ಮುರಳಿಗೌಡ, ನಗರಸಭೆ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net