ಕಾನೂನಿನ ಶಸಾಸಗಳು ಪೊಲೀಸರಿಗೆ ಅನ್ವಯಿಸುವುದಿಲ್ಲವೇ?ವಕೀಲೆ ಜೀವಾ ಆತ್ಮಹತ್ಯೆ ಕೇಸಲ್ಲಿ ಹೈಕೋರ್ಟ್ ಗರಂ

highcourt
Published on

 ಬೆಂಗಳೂರು: ಕಾನೂನಿನ ಶಸಾಸಗಳು ಪೊಲೀಸರಿಗೆ ತಲುಪುವುದಿಲ್ಲವೇ? ಇದೇ ಕೃತ್ಯವನ್ನು ಸಾಮಾನ್ಯರು ಎಸಗಿದ್ದರೆ ಕೆಲವೇ ಗಂಟೆಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುತ್ತಿದ್ದರು. ಇಲ್ಲಿ ಮೃತಳಿಗೆ ಕಿರುಕುಳ ನೀಡಿರುವುದು ಡಿವೈಎಸ್ಪಿ. ಹಾಗಾಗಿ ಆಕೆ ತನ್ನನ್ನು ಯಾರೂ ಬಂಧಿಸುವುದಿಲ್ಲ ಎಂದು ನಿರಾಂತಕವಾಗಿದ್ದಾರೆ. ಇದೆಲ್ಲವನ್ನು ಯಾವುದೇ ಕಾರಣಕ್ಕೂ ಒಪ್ಪುವಂತದ್ದಲ್ಲ...

ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಪೊಲೀಸ್ ತನಿಖೆ ಎದುರಿಸಿದ್ದ ವಕೀಲೆ ಎಸ್.ಜೀವಾ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಕೋರಿ ಸಲ್ಲಿಕೆಯಾದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ಶುಕ್ರವಾರ (ನ.29) ತೀರ್ಪು ಪ್ರಕಟಿಸುವುದಾಗಿ ಹೇಳಿದೆ. ಇದೇ ವೇಳೆ ಪೊಲೀಸರ ತನಿಖಾ ಲೋಪದ ವಿಚಾರವಾಗಿ ನ್ಯಾಯಪೀಠ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋರಿ ಬೆಂಗಳೂರು ವಕೀಲರ ಸಂಘ ಸಲ್ಲಿಸಿದ್ದ ಅರ್ಜಿ ಹಾಗೂ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ತಮ್ಮ ವಿರುದ್ಧ ದಾಖಲಾದ ಪ್ರಕರಣ ರದ್ದು ಕೋರಿ ಆರೋಪಿ ಕನಕಲಕ್ಷ್ಮಿ ಅರ್ಜಿ ಸಲ್ಲಿಸಿದರು. ಈ ಎರಡೂ ಅರ್ಜಿಗಳ ಪ್ರತ್ಯೇಕ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ವಿಚಾರಣೆ ವೇಳೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷಎಸ್. ವಿವೇಕ್ ಸುಬ್ಬಾರೆಡ್ಡಿ, ಮೃತ ಯುವತಿ ವೃತ್ತಿನಿರತ ವಕೀಲೆಯಾಗಿದ್ದರು. ಆಕೆಯ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ವಕೀಲರ ಸಂಘದಿಂದ ಅರ್ಜಿ ಸಲ್ಲಿಕೆಯಾಗಿದೆ.

ಪೊಲೀಸರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಶರಣಾಗಿದ್ದಾಳೆ. ಈ ಬಗ್ಗೆ ಸಾವಿಗೂ ಮೊದಲು ಆಕೆ ಡೆತ್‌ನೋಟ್ ಬರೆದಿದ್ದಾಳೆ. ಆತ್ಮಹತ್ಯೆಗೆ ತನಿಖಾಧಿಕಾರಿ ನೇರ ಹೊಣೆ ಎಂಬುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ರಾಜ್ಯ ಸರ್ಕಾರವು ಘಟನೆಗೆ ನ್ಯಾಯ ನೀಡುವ ಬಗ್ಗೆ ಭರವಸೆ ಇಲ್ಲ. ಹೀಗಾಗಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದರು.

ಅಲ್ಲದೆ ತನಿಖಾಧಿಕಾರಿ ಕನಕಲಕ್ಷ್ಮೀ ವಿರುದ್ಧ ಈ ಹಿಂದೆಯೂ ಇದೇ ತರನಾದ ಆರೋಪಗಳು ಕೇಳಿ ಬಂದಿವೆ ಎಂದರು. ನ್ಯಾಯಮೂರ್ತಿ ನಾಗಪ್ರಸನ್ನ ಅವರು, ಸರ್ಕಾರಿ ಪರ ವಕೀಲರನ್ನು ಉದ್ದೇಶಿಸಿ ಘಟನೆ ಸಂಭವಿಸಿ 4 ದಿನ ಕಳೆದಿದೆ. ಸರ್ಕಾರ ಏನು ಕ್ರಮ ಕೈಗೊಂಡಿದೆ?

13 ಪುಟಗಳ ಡೆತ್‌ನೋಟ್‌ನಲ್ಲಿರುವ ಚಿಕ್ಕ ಸಂಗತಿಯೂ ತನಿಖಾಧಿಕಾರಿಯ ಕಿರುಕುಳದ ಬಗ್ಗೆ ಹೇಳುತ್ತದೆ. ಅಧಿಕಾರಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆಯೇ? ಇದೆಲ್ಲವೂ ಯಾವುದೇ ಕಾರಣಕ್ಕೂ ಒಪ್ಪುವಂತಹದ್ದಲ್ಲ ಎಂದು ಕಿಡಿಕಾರಿದರು.

ಈ ವೇಳೆ ಸರ್ಕಾರಿ ಪರ ವಕೀಲರು, ಪ್ರಕರಣದ ಸಂಬಂಧ ತನಿಖೆ ನಡೆಸಲಾಗಿದೆ. ಎಲ್ಲ ಪ್ರಕರಣಗಳಲ್ಲೂ ಬಂಧನ ಮಾಡಲ್ಲ. ಪ್ರಕರಣದ ಗಂಭೀರತೆ ಮೇಲೆ ನಿರ್ಧಾರ ಆಗುತ್ತೆ ಎಂದರು. ಹಾಗಿದ್ದರೆ ಪೊಲೀಸರಿಗೆ ನೋಟಿಸ್ ಏಕೆೆ ಕೊಟ್ಟಿಲ್ಲ? ತನಿಖೆಗೆ ಸಹಕರಿಸುವಂತೆ ನೋಟಿಸ್ ನೀಡಿಲ್ಲ ಎಂದಾದರೆ ಏನು ತನಿಖೆ ಮಾಡುತ್ತಿದ್ದೀರಾ? ನಿಮಗೆ ತನಿಖಾಧಿಕಾರಿಯನ್ನು ಸಾಮಾನ್ಯರಂತೆ ನೋಡಲು ಸಾಧ್ಯವಾಗುತ್ತಿಲ್ಲ ಏಕೆ? ಡಿವೈಎಸ್‌ಪಿ ಎಂದರೆ ಕಾನೂನಿಗಿಂತ ಮೇಲೆ ಇರುವವರಾ? ಬಿಎನ್‌ಎಸ್‌ಎಸ್ ಸೆಕ್ಷನ್ 306 ಅಡಿ ಅಪರಾಧವಾಗಿದ್ದರೆ ಸಾಮಾನ್ಯ ಜನರನ್ನು ಬಿಡುತ್ತಿದ್ರಾ? ಎಂದು ಪೀಠ ಪ್ರಶ್ನಿಸಿತು.

ಸರ್ಕಾರಿ ಪರ ವಕೀಲರು, ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಅಡ್ವೋಕೇಟ್ ಜನರಲ್ ಜತೆಯೂ ಚರ್ಚೆ ನಡೆಸಲಾಗಿದೆ ಎಂದರು. ಆಗ ನ್ಯಾಯಮೂರ್ತಿ, ತನಿಖೆ ನಡೆಸಿಲ್ಲ. ಕೆಲವೊಂದು ಪ್ರಕರಣಕ್ಕೆ ತಡೆ ನೀಡಿದರೂ ತನಿಖೆಗೆ ಮುಂದಾಗುತ್ತೀರಿ ಏಕೆ? ಎಂದು ತರಾಟೆಗೆ ತೆಗೆದುಕೊಂಡರು.

ಡಿವೈಎಸ್‌ಪಿ ಕನಕಲಕ್ಷ್ಮೀ ಪರ ವಾದ ಮಂಡಿಸಿದ ವಕೀಲರನ್ನು ಉದ್ದೇಶಿಸಿ, ಈ ರೀತಿ ಕೃತ್ಯ ಎಸಗಿದ ಅಧಿಕಾರಿಯನ್ನು ನೀವು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ ಎಂದು ಪೀಠ ಪ್ರಶ್ನಿಸಿತು. ಆಗ ವಕೀಲರು ಅರ್ಜಿದಾರರು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ. ತನಿಖೆಯನ್ನು ಯಾರಿಗೇ ಹಸ್ತಾಂತರಿಸಿದರೂ ನ್ಯಾಯಾಲಯವು ಪ್ರಕರಣವನ್ನು ಮೇಲ್ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು.

ಸುದೀರ್ಘ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ಪ್ರಕರಣವನ್ನು ಸಿಬಿಐಗೆ ವಹಿಸುವ ಬಗ್ಗೆ ಶುಕ್ರವಾರ ತೀರ್ಪು ಪ್ರಕಟವಾಗಲಿದೆ.

ಕಿರುಕುಳ ಕೊಡಲಾಗಿದೆ...

ಮೃತಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಲಾಗಿದೆ. ನಿಂದನೆ ಮಾತುಗಳನ್ನು ಆಡಲಾಗಿದೆ. ನೀನು ವಕೀಲೆಯಾದರೆ ನ್ಯಾಯಾಲಯದ ವಾಚ್‌ಮನ್ ಬಳಿ ಬಿಟ್ಟು ಬಾ ಎಂದು ಕೀಳುಪದ ಬಳಕೆ ಮಾಡಲಾಗಿದೆ. ಕಡೇ ಪಕ್ಷ ಆಕೆಯೊಬ್ಬಳು ಮನುಷ್ಯಳು ಎಂಬಂತೆಯೂ ತನಿಖಾಧಿಕಾರಿ ವರ್ತಿಸಿಲ್ಲ. ನಾವು ಸುಪ್ರೀಂಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಮಾಡಬೇಕು. ಈ ತನಿಖಾಧಿಕಾರಿಗೆ ಡೆಸ್ಕ್ ಕೆಲಸ ನೀಡಿ, ದಯಮಾಡಿ ತನಿಖಾಧಿಕಾರಿ ಕೆಲಸ ನೀಡಬೇಡಿ, ಮತ್ತೆ ಇನ್ನೆಷ್ಟು ಮಂದಿ ಪ್ರಾಣ ಹೋಗಲಿದೆಯೋ ಎಂದು ವಿವೇಕ್ ಸುಬ್ಬಾರೆಡ್ಡಿ ತನಿಖಾಧಿಕಾರಿ ಕುರಿತು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net