ಅನಿವಾರ್ಯವಾಗಿ ನೀರು ಬಳಸಿದರೆ ರೈತರು ಕಳ್ಳರೇ?

siddalingappa
ಎಂ.ಸಿದ್ದಲಿಂಗಪ್ಪ . ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ
Published on

ಶಿವಮೊಗ್ಗ: ರಾಜ್ಯ ಸರ್ಕಾರ ಸತತವಾಗಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ನೀರಾವರಿ ತಿದ್ದುಪಡಿ ವಿಧೇಯಕದ ಮೂಲಕ ರೈತರನ್ನು ಕಳ್ಳರಂತೆ ಪರಿಗಣಿಸುತ್ತಿದೆ. ಇದು ರೈತರಿಗೆ ಮಾಡಿದ ಅಪಮಾನ. ಈ ವಿಧೇಯಕ ಹಿಂಪಡೆಯದಿದ್ದರೆ ಹೋರಾಟ ನಡೆಸಲಾಗುವುದು ಎಂಬು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಸಿದ್ದಲಿಂಗಪ್ಪ ಎಚ್ಚರಿಸಿದರು.

ನಾಲೆಗೆ ಬಿಡುವ ನೀರನ್ನು ಅನಧಿಕೃತವಾಗಿ ಬಳಕೆ ಮಾಡಿದರೆ ಅಂತಹ ರೈತರಿಗೆ ಎರಡು ಲಕ್ಷ ರೂ. ದಂಡ ವಿಧಿಸಲಾಗುವುದು. ಎರಡು ತಿಂಗಳಿಂದ ಎರಡು ವರ್ಷದವರೆಗೆ ಜೈಲು ಶಿಕ್ಷೆಯನ್ನು ವಿಧೇಯಕದಲ್ಲಿ ಉಲ್ಲೇಖಿಸಿರುವುದು ಖಂಡನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ನೀರು-ನಮ್ಮ ಹಕ್ಕು. ನಮ್ಮ ಭೂಮಿಯಲ್ಲೇ ಕಾಲುವೆ ಮೂಲಕ ನೀರು ತೆಗೆದುಕೊಂಡು ಹೋಗುತ್ತಿರುವ ಸರ್ಕಾರ ನಮ್ಮನ್ನೇ ಕಳ್ಳರಂತೆ ನೋಡುತ್ತಿರುವುದು ಎಷ್ಟು ಸರಿ? ರೈತರು ಭೂಮಿ ಕಳೆದುಕೊಂಡು ಜಾಗ ಕೊಟ್ಟಿರುವುದರಿಂದ ಕೊನೆಯ ಭಾಗಕ್ಕೂ ನೀರು ಹರಿಯುತ್ತಿದೆ. ಬರಗಾಲ ಅಥವಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ರೈತರು ನಾಲೆ ನೀರನ್ನು ಅನಧಿಕೃತವಾಗಿ ಬಳಸುತ್ತಾರೆ. ಇದನ್ನು ಅಕ್ಷಮ್ಯ ಅಪರಾಧದಂತೆ ಕಾಣುವುದು ಸರಿಯಲ್ಲ. ವಿಧೇಯಕ ಮಂಡನೆಗೂ ಮುನ್ನ ರೈತರೊಂದಿಗೆ ಚರ್ಚೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಿಂದಿನ ಸರ್ಕಾರ ರೈತರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾನಿಧಿ ಯೋಜನೆಯನ್ನು ಈ ಸರ್ಕಾರ ಸ್ಥಗಿತಗೊಳಿಸಿದೆ. ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಿಲ್ಲ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡಲು ಸರ್ಕಾರ ಮುಂದಾಗಿದೆ. ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಸಮ್ಮಾನ್ ಯೋಜನೆಯನ್ನೂ ರದ್ದುಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ್ ಬಿಳಕಿ, ಪ್ರಮುಖರಾದ ಮಲ್ಲಿಕಾರ್ಜುನ, ಆನಂದ, ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net