

ಬೆಂಗಳೂರು: ತಲಘಟ್ಟಪುರದಲ್ಲಿ ನಕಲಿ 10 ಕೋಟಿ ರೂ. ಮೊತ್ತದ ಜೆರಾಕ್ಸ್ ನೋಟ್ ಪತ್ತೆಯಾಗಿದ್ದು ಅನೇಕರಲ್ಲಿ ಪಕ್ಕದಲ್ಲಿದ್ದ ಚೊಂಬಿನಿಂದಾಗಿ ಗೊಂದಲ ಮೂಡಿದೆ.
ನಕಲಿ ನೋಟು ಪ್ರಕರಣದ ತನಿಖೆ ಮಾಡುತ್ತಿರುವ ಪೊಲೀಸರಿಗೆ ಹಲವು ಅನುಮಾನಗಳು ಉಂಟಾಗಿದ್ದು ಆರೋಪಿಗಳು ವೆಬ್ಸಿರೀಸ್ ನೋಡಿ ಹಣ ಜೆರಾಕ್ಸ್ ಮಾಡಿದ್ದಾರಾ ಎನ್ನುವ ಶಂಕೆಯೂ ಅದರಲ್ಲಿ ಒಂದು. ಇತ್ತೀಚೆಗೆ ಬಿಡುಗಡೆಯಾಗಿದ್ದ "ಫರ್ಜಿ" ಎನ್ನುವ ವೆಬ್ ಸಿರೀಸ್, ಸಾಕಷ್ಟು ಸದ್ದು ಮಾಡಿದ್ದು ಯಾವ ರೀತಿ ಓರ್ವ ಚಿತ್ರಕಲಾವಿದ ಆರ್ಥಿಕ ತೊಂದರೆ ನೀಗಿಸಲು ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಎನ್ನುವ ಕಥೆಯನ್ನು ಹೊಂದಿದೆ. ಈ ಕಥೆಯಿಂದ ಸ್ಫೂರ್ತಿ ಪಡೆದು ದಂಧೆ ಮಾಡಿದ್ದಾರಾ ಎನ್ನುವ ಶಂಕೆ ಪೊಲೀಸರ ಮನಸ್ಸಿನಲ್ಲಿ ಮೂಡಿದೆ.
ಈ ದಂಧೆಕೋರರು, ನಕಲಿ ನೋಟುಗಳನ್ನು ಮುದ್ರಿಸಿ, 500 ಮುಖಬೆಲೆಯ ಅಸಲಿ ನೋಟನ್ನು ಪಡೆದು 2000 ಮುಖಬೆಲೆ ನಕಲಿ ನೋಟು ಮಾರುತ್ತಿದ್ದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದರೆ ಕೆಲ ದಿನಗಳ ಹಿಂದೆಯೇ 2000 ರೂ. ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಂಡಿದ್ದು, ಇದರಿಂದಾಗಿ ನಕಲಿ ನೋಟುಗಳು ನಿಷ್ಪ್ರಯೋಜಕವಾಗಿದೆ. ಈ ಹಿನ್ನೆಲೆಯಲ್ಲಿ ಖದೀಮರು ಅವುಗಳನ್ನು ಎಸೆದು ಹೋಗಿರಬಹುದು ಎನ್ನಲಾಗುತ್ತಿದೆ.
ಸದ್ಯ ತಲಘಟ್ಟಪುರ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ನಡುವೆ, ಸೂಟ್ಕೇಸ್ ಪಕ್ಕದಲ್ಲಿ ಚೊಂಬೊಂದು ಲಭಿಸಿದ್ದು, ಇದು ಪೊಲೀಸರ ತಲೆ ಕೆಡಿಸಿದೆ ಎನ್ನಲಾಗಿದೆ. ಇವರು ರೈಸ್ ಪುಲ್ಲಿಂಗ್ ದಂಧೆ ಕೂಡ ನಡೆಸಿರುವ ಬಗ್ಗೆ ಅನುಮಾನ ಉಂಟಾಗಿದ್ದು ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆಯಲು ಈ ರೀತಿ ಚೊಂಬು ಇಟ್ಟಿರಬಹದಾ ಎಂಬ ಆ್ಯಂಗಲ್ನಲ್ಲೂ ತನಿಖೆ ನಡೆಸಲಾಗುತ್ತಿದೆ.