ಅರಣ್ಯಭೂಮಿ ಹಕ್ಕುಪತ್ರ ಧರಣಿ ಮತ್ತೆ ಆರಂಭ

Kailancha-Ph-001-Eruliga-Vaddarahalli-Prathibatane-17-6-2021
Published on

ಕೈಲಾಂಚ: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹೋಬಳಿಯ ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದವರು ಹಂದಿಗೊಂದಿ ಅರಣ್ಯ ಪ್ರದೇಶದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಗುರುವಾರದಿಂದ ಮತ್ತೆ ಆರಂಭವಾಗಿದೆ.

ವಡ್ಡರಹಳ್ಳಿ ಗೊಲ್ಲರದೊಡ್ಡಿ ಗ್ರಾಮದ ಇರುಳಿಗ ಜನಾಂಗದ 24 ಕುಟುಂಬಗಳು ಎಂಟು ವರ್ಷಗಳಿಂದ ಅರಣ್ಯ ಭೂಮಿ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿವೆ. ನ್ಯಾಯಯುತವಾಗಿ ಸಲ್ಲಬೇಕಿರುವ ಹಕ್ಕುಪತ್ರ ಅರಣ್ಯ ಇಲಾಖೆಯ ದ್ವಂದ್ವ ನಿಲುವಿನಿಂದ ದಕ್ಕುತ್ತಿಲ್ಲ. ಹಲವಾರು ಭಾರಿ ಪ್ರತಿಭಟನೆ ನಡೆಸಿದರೂ ಅನ್ಯಾಯವಾಗುತ್ತಿದೆ. ಹಕ್ಕುಪತ್ರ ನೀಡುವವರೆಗೂ ಅರಣ್ಯಬಿಟ್ಟು ಕದಲುವುದಿಲ್ಲ.

ಇದು ನಮ್ಮ ಅಂತಿಮ ಹೋರಾಟವಾಗಿದೆ ಎಂದು ಕಳೆದ 115 ದಿನಗಳಿಂದ ಸಂಸಾರ ಸಮೇತ ಅರಣ್ಯದಲ್ಲೇ ಟೆಂಟ್ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಕರೊನಾ 2ನೇ ಅಲೆ ಹೆಚ್ಚಿದ ಪರಿಣಾಮ ಸೋಂಕು ಹರಡುವ ಭೀತಿಯಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಕರೊನಾ ಅಲೆ ಇಳಿಮುಖವಾದರೂ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದಿದ್ದರಿಂದ ಪ್ರತಿಭಟನೆ ಮುಂದುವರಿಸಿದ್ದೇವೆ ಎನ್ನುತ್ತಾರೆ ಪ್ರತಿಭಟನಾ ನಿರತರು. ಪ್ರತಿಭಟನೆಯಲ್ಲಿ ಲಕ್ಷ್ಮಮ್ಮ, ಜೆ.ಎನ್. ಶಿವರಾಜು, ದೇವಯ್ಯ, ನವಣಯ್ಯ, ಮಹದೇವಮ್ಮ, ಶಿವಮಾದಮ್ಮ, ಈರಮ್ಮ, ಮಾದಮ್ಮ ಮುಂತಾದವರಿದ್ದರು.

ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ 8 ವರ್ಷಗಳಿಂದ ಹೋರಾಡುತ್ತಿದ್ದೇವೆ. ಒಕ್ಕಲೆಬ್ಬಿಸಿದ ಜಾಗದಲ್ಲಿಯೇ ಅರಣ್ಯ ಭೂಮಿ ನೀಡಲು ಆದೇಶವಿದ್ದರೂ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ನ್ಯಾಯ ಸಿಗದಿದ್ದರೆ ಜಿಲ್ಲಾಡಳಿತ, ಇಲ್ಲವೇ ಮುಖ್ಯಮಂತ್ರಿಗಳ ಮನೆ ಎದುರು ಧರಣಿ ಕೂರುತ್ತೇವೆ. ಕೃಷ್ಣಮೂರ್ತಿ ಗ್ರಾಮ ಅರಣ್ಯ ಹಕ್ಕು ಸಮಿತಿ, ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net