

ಬೆಂಗಳೂರು: ಅಧಿಕಾರಿಗಳಿಬ್ಬರ ಕಚ್ಚಾಟದ ಬಗ್ಗೆ ಸರ್ಕಾರ ಕಣ್ಣು ಮುಚ್ಚಿಕೊಂಡು ಕುಳಿತಿಲ್ಲ. ಇಬ್ಬರ ವರ್ತನೆಯೂ ಅತಿಯಾಯಿತು. ಸಾಮಾನ್ಯ ಜನರೂ ಈ ರೀತಿ ವರ್ತಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದರು.
ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪೊಲೀಸ್ ಮಹಾ ನಿರ್ದೇಶಕರ ಜತೆಗೆ ಮಾತನಾಡಿರುವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೂ ಬಂದಿದ್ದು, ಕಾನೂನು ಚೌಕಟ್ಟಿನೊಳಗೆ ಕ್ರಮವಹಿಸಲಿದ್ದಾರೆ ಎಂದರು.
ರೋಹಿಣಿ ಸಿಂಧೂರಿ ಹಾಗೂ ಡಿ.ರೂಪಾ ತಮ್ಮ ನಡುವಿರುವ ವೈಯಕ್ತಿಕ ಸಮಸ್ಯೆಯನ್ನು ಬೀದಿಗೆ ತಂದಿದ್ದಾರೆ. ಪರಸ್ಪರ ಕೆಸರೆರಚಾಟಕ್ಕೆ ಇಳಿದಿರುವುದು ನೋವಿನ ಸಂಗತಿ ಎಂದು ಆರಗ ಜ್ಞಾನೇಂದ್ರ ಬೇಸರ ಹೊರಹಾಕಿದರು.
ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಜನರು ದೇವ ಮಾನವರು ಎಂದು ಭಾವಿಸಿದ್ದಾರೆ. ಆ ಹುದ್ದೆಯ ಘನತೆ- ಗೌರವಕ್ಕೆ ಕಳಂಕ ತರುವುದು ಸರಿಯಲ್ಲ. ಇಬ್ಬರ ವರ್ತನೆಯನ್ನು ಸಿಎಂ ಬೊಮ್ಮಾಯಿ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು