

ಹೊಳೆಹೊನ್ನೂರು: ಗ್ರಾಮೋದ್ಧಾರಕ್ಕಾಗಿ ಗ್ರಾಮಸ್ಥರು ಜನಪ್ರತಿನಿಧಿಗಳ ಬಳಿ ದುಂಬಾಲು ಬಿದ್ದು, ಅನುದಾನ ತಂದು ಕಾಮಗಾರಿ ಅನುಷ್ಠಾನಗೊಳಿಸುತ್ತಾರೆ. ಆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಮಾಡುವ ಎಡವಟ್ಟಿನಿಂದ ಕಾಮಗಾರಿಗಳು ಕಳಪೆಯಾಗಿ ಕೋಟ್ಯಂತರ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಇದಕ್ಕೆ ಸಾಕ್ಷಿಯಂತಿದೆ ಅರಬಿಳಚಿ ಸರ್ಕಾರಿ ಆಸ್ಪತ್ರೆ ಕಟ್ಟಡ.
ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಈ ಹಿಂದೆ ಶಾಸಕರಾಗಿದ್ದ ಅಶೋಕ್ ನಾಯ್ಕ ಮಂಜೂರು ಮಾಡಿಸಿದ 2.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅರಬಿಳಚಿಯ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆಗೂ ಮುನ್ನವೇ ಕಿತ್ತುಹೋಗುತ್ತಿದೆ. ಕೆಲವೆಡೆ ನೀರು ಸೋರಿಕೆ ಆಗುತ್ತಿರುವುದರಿಂದ ಗ್ರಾಮಸ್ಥರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹತ್ತಾರು ವರ್ಷದಿಂದ ಸಂಸದರು, ಶಾಸಕರ ಬೆನ್ನುಬಿದ್ದು ನಿರ್ಮಿಸಿದ ಕಟ್ಟಡದ ಗೋಡೆಯನ್ನು ಬರಿಗೈಯಲ್ಲಿ ಕೆರೆದರೂ ಸಿಮೆಂಟ್ ಕಿತ್ತು ಬರುವಷ್ಟರ ಮಟ್ಟಿಗೆ ಕಳಪೆಯಾಗಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ನೂತನ ಆಸ್ಪತ್ರೆಯ ಕಾಮಗಾರಿಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಸ್ಥರು ಸಂಬಂಧಿಸಿದ ಇಲಾಖೆಗೆ ದೂರು ನೀಡಿದ್ದಾರೆ. ಆದರೆ ಗುತ್ತಿಗೆದಾರ ಹಾಗೂ ಇಂಜಿನಿಯರ್‌ಗಳು ನೆಪ ಹೇಳುತ್ತಿದ್ದಾರೆಯೇ ಹೊರತು ಗ್ರಾಮದತ್ತ ಸುಳಿಯುತ್ತಿಲ್ಲ. ಕಟ್ಟಡ ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ವೈರಿಂಗ್, ಪ್ಲಂಬಿಂಗ್ ಕೆಲಸಗಳು ಬಾಕಿ ಇವೆ. ಅಧಿಕಾರಿಗಳು ಬರುವವರೆಗೂ ಕೆಲಸ ಮಾಡುವುದೇ ಬೇಡವೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಸಭೆಗೆ ಗುತ್ತಿಗೆದಾರ ಗೈರು: ಕಟ್ಟಡದ ಗೋಡೆಗಳಲ್ಲದೆ ಪಿಲ್ಲರ್‌ಗಳ ಸಿಮೆಂಟ್ ಸಹ ಕಿತ್ತುಬರುವುದನ್ನು ಕಂಡ ಗ್ರಾಮಸ್ಥರು ಗರಂ ಆಗಿದ್ದಾರೆ. ಶನಿವಾರ ನಡೆಯಬೇಕಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯನ್ನು ಕಟ್ಟಡದ ಮೂಲ ಗುತ್ತಿಗೆದಾರ ಹಾಗೂ ಇಲಾಖೆಯ ಇಂಜಿನಿಯರ್ ಬರುವವರೆಗೆ ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ನಮ್ಮೂರಿನ ಆಸ್ಪತ್ರೆ ಕಟ್ಟಡ ಕಿತ್ತು ಬರುತ್ತಿದೆ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ವಿಡಿಯೋ ಮಾಡಿ ಕಳುಹಿಸಿ ಭೇಟಿ ಮಾಡುವಂತೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಕಳಪೆಯಾಗಿರುವ ಕಟ್ಟಡದಲ್ಲಿ ಗ್ರಾಮಸ್ಥರು ಯಾವ ಧೈರ್ಯದಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಯುತ್ತಿಲ್ಲ ಎನ್ನುತ್ತಾರೆ ಗ್ರಾಮದ ರೈತ ಮುಖಂಡ ಮಂಜುನಾಥ್.
ಅರಬಿಳಚಿ ಸರ್ಕಾರಿ ಆಸ್ಪತ್ರೆ ವ್ಯಾಪ್ತಿಗೆ 12 ಗ್ರಾಮಗಳು ಬರುತ್ತವೆ. ಅಕ್ಕಪಕ್ಕದ ಹಳ್ಳಿಗಳ 13,623 ಗ್ರಾಮಸ್ಥರು ಆಸ್ಪತ್ರೆಯ ಪ್ರಯೋಜನ ಪಡೆಯುತ್ತಾರೆ. ಕಟ್ಟಡ ತಾರಸಿವರೆಗೆ ಗುಣಮಟ್ಟದಿಂದ ಕೂಡಿದೆ. ಕಟ್ಟಡದ ಗಿಲಾವ್ ಸೇರಿ ಬಳಸಿರುವ ಉತ್ಪನ್ನಗಳು ಸಂಪೂರ್ಣ ಕಳಪೆಯಾಗಿವೆ. ಕಟ್ಟಡದ ಗಿಲಾವ್ ಅನ್ನು ಹಾಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಗಿಲಾವ್ ಕಿತ್ತು ಬರುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಆಸ್ಪತ್ರೆ ವೈದ್ಯಾಧಿಕಾರಿ ಜಗದೀಶ್.
ಶಾಲೆ ಹಾಗೂ ಆಸ್ಪತ್ರೆ ಕಾಮಗಾರಿಗಳು ಕಳಪೆಯಾದರೆ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಗ್ರಾಮಸ್ಥರು ಕಳಿಸಿದ ವಿಡಿಯೋವನ್ನು ನಾನು ನೋಡಿದ್ದೇನೆ. ಕಾಮಾಗಾರಿ ಕಳಪೆ ಆಗಿರುವುದು ಮೆಲ್ನೋಟಕ್ಕೆ ಕಾಣುತ್ತಿದೆ. ಕಟ್ಟಡದ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು ಎಂದು ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಭರವಸೆ ನೀಡಿದ್ದಾರೆ.