ಸೆಲ್ಫಿ, ಫೋಟೋಗೆಲ್ಲ... ಮ್ಯೂಸಿಕ್ ಮಾಂತ್ರಿಕ ಎ.ಆರ್​. ರೆಹಮಾನ್ ಓಪನ್ ಟಾಕ್ | AR Rahman

AR Rahman
Published on

ನವದೆಹಲಿ: 'ಜೈಹೋ' ಹಾಡಿನ ಮಾಂತ್ರಿಕ, ಸಂಗೀತ ದಿಗ್ಗಜ ಎ.ಆರ್​. ರೆಹಮಾನ್ (AR Rahman) ಯಾರಿಗೆ ಗೊತ್ತಿಲ್ಲ ಹೇಳಿ? ಕೇವಲ ಭಾರತೀಯ ಮ್ಯೂಸಿಕ್ ಪ್ರಿಯರು ಮಾತ್ರವಲ್ಲದೇ ವಿದೇಶಿ ನೆಲದಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಸಂಗೀತ ಮಾಂತ್ರಿಕ ರೆಹಮಾನ್​, ಇತ್ತೀಚೆಗಷ್ಟೇ ಚಿತ್ರರಂಗದಲ್ಲಿ ತಾವು ಆಯ್ಕೆ ಮಾಡಿಕೊಳ್ಳುವ ಪ್ರಾಜೆಕ್ಟ್​ ಹಾಗೂ ತಮಗ್ಯಾಕೆ ಬಹಳ ಬೇಗ ಕೋಪ ಆವರಿಸಿಕೊಳ್ಳುತ್ತದೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

90ರ ದಶಕದಲ್ಲಿ ತಮಿಳು, ಹಿಂದಿ, ತೆಲುಗು, ಮಲಯಾಳಂ, ಇಂಗ್ಲಿಷ್ ಮತ್ತು ಇತರ ಭಾಷೆಗಳಲ್ಲಿ ಹಲವಾರು ಹಿಟ್‌ಗಳನ್ನು ನೀಡಿರುವ ಎ.ಆರ್​. ರೆಹಮಾನ್​, ಇತ್ತೀಚೆಗಷ್ಟೇ ನಡೆದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿ, ಅಂದು 'ಸ್ಲಮ್​ ಡಾಗ್​ ಮಿಲಿಯನೇರ್'​ ಚಿತ್ರದ 'ಜೈಹೋ' ಹಾಡಿಗೆ ಆಸ್ಕರ್​ ಪ್ರಶಸ್ತಿ ಪಡೆದುಕೊಂಡೆ. ಆದರೆ, ಇಂದು ಯಾರು ಅದರ ಬಗ್ಗೆ ಯೋಚಿಸುತ್ತಾರೆ? ಸುಮ್ಮನೆ ನನ್ನ ಪಾಲಿಗೆ ಬಂದ ಪ್ರಾಜೆಕ್ಟ್​ಗಳನ್ನೆಲ್ಲ ಆಯ್ಕೆ ಮಾಡಿಕೊಂಡು, ಮಾಡುವುದರ ಬದಲಿಗೆ ನನಗೆ ಯಾವುದು ಖುಷಿ ಕೊಡುತ್ತದೋ ಅದಕ್ಕೆ ಮಾತ್ರ ಕೆಲಸ ಮಾಡಲು ನಿರ್ಧರಿಸಿದ್ದೇನೆ" ಎಂದರು.

"ಈ ಹಿಂದೆ ಬಹಳ ತಾಳ್ಮೆಯಿತ್ತು. ಆದರೆ, ಈಗ ಕಿಂಚಿತ್ತು ಇಲ್ಲ. ವಯಸ್ಸಾದಂತೆ ನನ್ನ ಉತ್ಸಾಹ, ಸಂಯಮತೆ ನಶಿಸಿ ಹೋಗಿವೆ. ವೇದಿಕೆಯ ಮೇಲೆ ಹೆಚ್ಚು ಸಮಯ ನಿಲ್ಲಲು ಆಗುವುದಿಲ್ಲ. ಬಹಳ ಬೇಗನೇ ಕೋಪ ಆವರಿಸಿಕೊಳ್ಳುತ್ತದೆ. ಯಾರಾದರೂ ಫೋಟೋ ಅಥವಾ ಸೆಲ್ಫಿ ಅಂತ ಕೇಳಿದ್ರೆ, ತಕ್ಷಣವೇ ನಾನು ಇಲ್ಲ, ಕೊಡಲು ಆಗುವುದಿಲ್ಲ ಎಂದು ನೇರವಾಗಿ ಹೇಳಿಬಿಡ್ತೇನೆ. ನನಗೆ ಫೋಟೋ ತೆಗೆಸಿಕೊಳ್ಳುವುದು, ಕೊಡುವುದು ಎಂದರೆ ಇಷ್ಟವೇ. ಆದ್ರೆ, ಆಗದ ಹಂತವನ್ನು ತಲುಪಿದ್ದೇನೆ" ಎಂದು ಹೇಳಿದರು.

"ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚು ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವುದಿಲ್ಲ. ಈ ಹಿಂದೆ ಕೆಲವು ಸಂಗೀತ ನಿರ್ದೇಶಕರು ವರ್ಷಕ್ಕೆ 40 ಸಿನಿಮಾಗಳನ್ನು ಮಾಡುತ್ತಿದ್ದರು. ಅವರೆಲ್ಲ ಒಂದು ರೀತಿ ಫ್ಯಾಕ್ಟರಿಯಂತೆ ಕೆಲಸ ಮಾಡ್ತಿದ್ದರು. ಹಾಗೆ ಕೆಲಸ ಮಾಡುವುದರಿಂದ ಸಂಗೀತ ಸೃಷ್ಟಿಸುವ ಸಂತೋಷ ಮರೆಯಾಗುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ಈಗ ನಾನು ಕೆಲಸ ಮಾಡುವುದರ ಜತೆಗೆ ಹೆಚ್ಚಾಗಿ ವಿಶ್ರಾಂತಿ ಪಡಿತೀನಿ. ಬಹುಮುಖ್ಯ ಪ್ರಾಜೆಕ್ಟ್​ಗಳನ್ನು ಆಯ್ಕೆ ಮಾಡಿಕೊಳ್ಳುವುದರೊಂದಿಗೆ ನನ್ನ ವೈಯಕ್ತಿಕ ಕಾರ್ಯಗಳಿಗೆ ಮೊದಲ ಆದ್ಯತೆ, ಪ್ರಾಮುಖ್ಯತೆ ನೀಡ್ತಿದ್ದೇನೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net