

ಎಲ್ಲ ನಿಷಾದರೂ ಅಧರ್ವಿುಷ್ಠರೇ - ಎಂಬ ಭಾವನೆಯಿದ್ದಿದ್ದಲ್ಲಿ, ರಾಮನಿಗೂ ಈ ಗುಹನಿಗೂ ಸ್ನೇಹವೇ ಏರ್ಪಡುತ್ತಿರಲಿಲ್ಲ. ಆದರೆ ವಾಲ್ಮೀಕಿಗಳು ಆತನನ್ನು ‘ರಾಮಸ್ಯಾತ್ಮಸಮಃ ಸಖಾ’ ಎಂದೇ ಚಿತ್ರಿಸುತ್ತಾರೆ. ಏನು ಹಾಗೆಂದರೆ? ಗುಹನು ರಾಮನ ಸಖ. ಸಖ ಎಂದರೆ ಸ್ನೇಹಿತ; ಅಷ್ಟೇ ಅಲ್ಲ. ಆತ್ಮ-ಸಮನಾದ ಸಖ! - ತನಗೆ ಸಮನಾದ ಮಿತ್ರ - ಎಂಬುದಾಗಿ ವಾಲ್ಮೀಕಿಗಳು ಚಿತ್ರಿಸುತ್ತಾರೆ. ಕೆಳಜಾತಿಯವರ ಬಗ್ಗೆ ನಿಕೃಷ್ಟ-ಭಾವನೆಯಿದ್ದಿದ್ದಲ್ಲಿ ವಾಲ್ಮೀಕಿಗಳು ಗುಹನನ್ನು ರಾಮನಿಗೆ ಸಮನೆಂಬಂತೆ ಚಿತ್ರಿಸಲು ಸಾಧ್ಯವೇ? ರಾಜನಾದವನು ಎಲ್ಲರೊಂದಿಗೂ ಸ್ನೇಹದಿಂದಲೇ ಇರತಕ್ಕದ್ದು. ಪ್ರಜೆಗಳಲ್ಲಿ ಯಾರು ಯಾರು ಬಲಶಾಲಿಗಳೋ ಅವರೆಲ್ಲರೊಂದಿಗೆ ಸ್ನೇಹಭಾವವು ರಾಜನಿಗೆ ಮುಖ್ಯವಾಗುತ್ತದೆ. ಅಟವಿಯಲ್ಲಿ, ಎಂದರೆ ಕಾಡಿನಲ್ಲಿ, ವಾಸಮಾಡುವವರನ್ನು ಆಟವಿಕರು - ಎನ್ನುತ್ತಾರೆ. ಆಟವಿಕರಲ್ಲೂ ಅನೇಕ ಅನುಯಾಯಿಗಳನ್ನು ಹೊಂದಿರುವವರೂ, ಸೇನಾ-ಬಲವನ್ನೇ ಹೊಂದಿರುವವರೂ ಇರುವುದುಂಟು. ವಿಶೇಷ-ಪ್ರಸಂಗಗಳಲ್ಲಿ ಅವರ ಸ್ನೇಹ-ಸಾಹ್ಯಗಳೂ ರಾಜನಿಗೆ ಬೇಕಾಗಬಹುದು.
ಆದುದರಿಂದ ಅವರ ಪ್ರೀತಿ-ವಿಶ್ವಾಸ ಗಳನ್ನು ಗಳಿಸುವುದೂ ರಾಜನಿಗೆ ಅವಶ್ಯವಾಗುವುದು. ಹೀಗಾಗಿ ರಾಜ್ಯದ ರಕ್ಷಣೆಯ ದೃಷ್ಟಿಯಿಂದ ಊರಿನಲ್ಲಿರುವ ಹಾಗೂ ಕಾಡಿನಲ್ಲಿರುವ ಎಲ್ಲ ಬಲಶಾಲಿಗಳೊಂದಿಗೆ ಸಖ್ಯ-ಸೌಜನ್ಯಗಳನ್ನು ಕಾಪಾಡಿಕೊಳ್ಳುವುದು ರಾಜನಿಗೆ ಉಪಕಾರಿಯೇ ಆಗುತ್ತದೆ. ಗುಹನು ಸ್ಥಪತಿಯೆಂಬುದಾಗಿಯೂ ಪ್ರಸಿದ್ಧನಾಗಿದ್ದವನು. ಸ್ಥಪತಿಯೆಂದರೆ ಶಿಲ್ಪಿ. ಹೀಗೆ ಈ ಗುಹನು ಬಲವಾನ್ ಮಾತ್ರವಲ್ಲದೆ ಸ್ಥಪತಿಯೂ ಆದವನು. ಅರ್ಥಾತ್, ಸೈನ್ಯ-ಬಲವುಳ್ಳವನೂ, ಕಲಾ-ಜ್ಞಾನವಂತನೂ ಆಗಿರುವವನು.
ಇವೆಲ್ಲ ಆತನಲ್ಲಿದ್ದ ಗರಿಮೆಗಳೇ. ಆದರೆ ಅಷ್ಟುಮಾತ್ರದಿಂದಲೇ ರಾಮನಿಗೆ ಆತ್ಮ-ಸಮನಾದ ಸಖನಾಗಿಬಿಡುವುದಿಲ್ಲ, ಅಲ್ಲವೇ? ಹಾಗಿದ್ದರೆ ಆತನಲ್ಲಿದ್ದ ಮತ್ತಾವ ಗುಣದಿಂದಾಗಿ ರಾಮನು ಆತನ ವಿಷಯದಲ್ಲಿ ಸಾದರನಾಗಿದ್ದನು? ಒಬ್ಬನನ್ನು ಅಳೆದುಕೊಳ್ಳಲು ಆತನ ಬಗ್ಗೆ ಇತರರು ಏನು ಹೇಳುತ್ತಾರೆ? - ಎಂದು ಗಮನಿಸುವುದು ಸಹಜವೂ ಸುಲಭವೂ ಆದ ಕ್ರಮವೇ; ಆದರೆ ಅದನ್ನೇ ನೆಚ್ಚಿಕೊಳ್ಳುವುದು ಯುಕ್ತವಾಗಲಾರದು. ಬೇರೆಯವರ ಮಾತಿಗೆ ಬೆಲೆಗೊಡುವುದಕ್ಕಿಂತ ಹೆಚ್ಚಾಗಿ, ನಮ್ಮೊಂದಿಗೆ ಆ ವ್ಯಕ್ತಿಯ ವ್ಯವಹಾರವು ಯಾವ ತೆರನಾದುದು? - ಎಂಬುದನ್ನೇ ಪ್ರಧಾನವಾಗಿ ಗಮನಿಸಿಕೊಳ್ಳಬೇಕಾಗುತ್ತದೆ.
ರಾಮನೊಂದಿಗೆ ಗುಹನು ವರ್ತಿಸಿದ ಬಗೆಯೇನು? - ಎಂಬುದನ್ನು ಕಿಂಚಿತ್ತಾದರೂ ನೋಡಬೇಕಲ್ಲವೇ? ತನ್ನೆಡೆಯ ಸೀಮೆಯೊಳಗೆ ರಾಮನು ಬಂದುದನ್ನು ತಿಳಿದೊಡನೆಯೇ, ವೃದ್ಧರು, ಅಮಾತ್ಯರು, ಹಾಗೂ ಬಂಧುಗಳೊಂದಿಗೆ ಬಂದವನೇ, ರಾಮನನ್ನು ಆದರದಿಂದ ಎದುರ್ಗೆಂಡ, ಗುಹ. ರಾಮನನ್ನು ಆಲಿಂಗಿಸಿಕೊಂಡು ಆತನು ಹೇಳಿದ್ದೇನು? ‘ರಾಮನೇ, ಅಯೋಧ್ಯೆಯೆಂತೋ ಈ ಪ್ರದೇಶವೂ ನಿನಗೆ ಅಂತೆಯೇ. ನಿನಗಾಗಿ ನಾನು ಏನು ಮಾಡಲಿ ಹೇಳು. ಇಂತಹ ಪ್ರಿಯಾತಿಥಿಯನ್ನು ಯಾರು ತಾನೆ ಹೊಂದಿಯಾರು?’
ಜೊತೆಗೆ, ಅಘರ್Â-ಪಾದ್ಯಗಳನ್ನೂ ಅನ್ನಾಹಾರಗಳನ್ನೂ ವ್ಯವಸ್ಥೆ ಮಾಡಿದನು. ಮತ್ತೆ ಹೇಳಿದನು: ‘ರಾಮನೇ, ನನ್ನೀ ಭೂಮಿಯೆಲ್ಲಾ ನಿನ್ನದೇ. ನಾವು ನಿನ್ನ ಆಳುಗಳು. ನೀನೇ ನಮಗೆ ಒಡೆಯ. ನಮ್ಮ ರಾಜ್ಯವನ್ನು ನೀನೇ ಚೆನ್ನಾಗಿ ಆಳು’- ಎಂದುದಲ್ಲದೆ, ‘ಇದೋ ನಿನಗಾಗಿ ಬಂದಿವೆ ಈ ಭಕ್ಷ್ಯ-ಭೋಜ್ಯಗಳು, ಪೇಯ-ಲೇಹ್ಯಗಳು; ನಿದ್ರಿಸಲು ಶಯ್ಯೆಗಳು ಸಿದ್ಧವಾಗಿವೆ; ನಿನ್ನ ಕುದುರೆಗಳಿಗೂ ಆಹಾರವುಬಂದಿದೆ’ ಎಂದನು. ಮಹೋನ್ನತವಾದ ಬದುಕು ಎದುರಿಗೆ ಬಂದಿರಲು, ಅದರ ಗುರುತ್ವವನ್ನು ಗುರುತಿಸಿಕೊಂಡವನ ಮೈ-ಮನಸ್ಸುಗಳು ಸಹಜವಾಗಿ ಬಗ್ಗುವಲ್ಲಿ, ‘ನ ಮಮ’-‘ನಮಃ’-ಗಳು ತಾವಾಗಿ ಉಂಟಾಗುವ ಬಗೆಯೊಂದುಂಟು; ಅದುವೇ ಪೂರ್ಣ- ಸಮರ್ಪಣೆಯ ತತ್ತ್ವ - ಎಂಬುದನ್ನು ಶ್ರೀರಂಗ-ಮಹಾಗುರುಗಳು ಸುಭಗವಾಗಿ ನಿರೂಪಿಸಿದ್ದರು. ಕೇವಲ ಪರಸ್ಪರೋಪಯೋಗಕ್ಕೆ
ಬರುವಷ್ಟೇ ದೃಷ್ಟಿಯಿಂದಾದ ವ್ಯವಹಾರದ ಪರಿಯಿದಲ್ಲ. ರಾಮನ ವಿಷಯದಲ್ಲಿ ಗುಹನಿಗೆ ಉತ್ಕಟ- ಗೌರವವೂ; ಗುಹನ ಬಗೆಗೆ ರಾಮನಿಗೆ ಅತಿಶಯಿತ- ಪ್ರೀತಿಯೂ - ಇದ್ದುವಾಗಿ, ಇಂತಹ ಅಕಪಟ- ಪ್ರೀತಿ- ಗೌರವಗಳ ಮಧುರ-ಮೇಳನವಿದ್ದಾಗ ಆತ್ಮ-ಸಮನೆಂಬೀ ಆರ್ದ್ರವಾದ ಉಕ್ತಿಯು ಸತ್ಯ-ಸಹಜವಾದುದೇ ಅಲ್ಲವೇ?
(ಲೇಖಕರು ಆಧ್ಯಾತ್ಮಚಿಂತಕರು ಮತ್ತು ಪ್ರವಚನಕಾರರು ಅಷ್ಟಾಂಗಯೋಗ ವಿಜ್ಞಾನಮಂದಿರಂ)