ಸೈಕಲ್​ ಮೇಲೆ 2700 ಕಿ.ಮೀ. ಪ್ರಯಾಣಿಸಲಿರುವ ಪುನೀತ್​ ಅಭಿಮಾನಿ; 'ಅಪ್ಪು ಯಾತ್ರೆ'ಗೆ ನೆಟ್ಟಿಗರು ಫಿದಾ

appuyatre
Published on

ಮಣಿಕರಣ್/ಬೆಂಗಳೂರು: ದಿವಂಗತ ನಟ ಪುನೀತ್ ರಾಜ್​​ಕುಮಾರ್​​ ಸ್ಮರಣಾರ್ಥ ಅವರ ಅಭಿಮಾನಿಗಳು ನಿತ್ಯ ಯಾವುದಾದರೂ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇದು ಕೇವಲ ನಮ್ಮ ದೇಶದಲ್ಲಿ ಮಾತ್ರ ಅಲ್ಲ. ಜಗತ್ತಿನ ಮೂಲೆಮೂಲೆಯಲ್ಲೂ ಪುನೀತ್​​ರ ಮರಣದಿಂದ ಮರಗಿರುವ ಹೃದಯಗಳು ಬೇರೆ ಬೇರೆ ರೀತಿ ತಮ್ಮ ಅಭಿಮಾನವನ್ನು ಸಾಬೀತುಪಡಿಸುತ್ತಿದ್ದಾರೆ. ಇಲ್ಲೊಬ್ಬ ಅಭಿಮಾನಿ ಮಾಡಲಿರುವ ಯಾತ್ರೆಯ ಬಗ್ಗೆ ನೆಟ್ಟಿಗರು ಸಿಕ್ಕಾಪಟ್ಟೆ ಮಾತಾಡಿಕೊಳ್ಳುತ್ತಿದ್ದಾರೆ.

ಅಪ್ಪು ಅಭಿಮಾನಿಯಾದ ಚಾರಣಕಾರ ಗುರುಪ್ರಕಾಶ್ ಪುನೀತ್​​​ಗೆಂದು 2700 ಕಿಲೋ.ಮೀಟರ್ ಸೈಕಲ್ ಯಾತ್ರೆ ಮಾಡಲಿದ್ದಾರೆ.

ಹೌದು, ಹಿಮಾಚಲ ಪ್ರದೇಶದ ಮಣಿಕರಣ್​ದಿಂದ ಆರಂಭಿಸಿ ಕರ್ನಾಟಕದ ಬೆಂಗಳೂರಿನಲ್ಲಿರುವ ಅಪ್ಪು ಸಮಾಧಿಯವರೆಗೆ 'ಮೌಂಟ್​ನೇರ್ ಗುರುಪ್ರಕಾಶ್'ರ ಅಭಿಮಾನದ ಬೈಸಿಕಲ್ ಯಾತ್ರೆ ನಡೆಯಲಿದೆ. ಈ ಅಪರೂಪದ ಯಾತ್ರೆ ಡಿ.10 ರಂದು ಆರಂಭವಾಗಲಿದೆ. ಇದರ ಬಗ್ಗೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬರೆದುಕೊಂಡಿದ್ದು, ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನು, ಅಪ್ಪು ಸಮಾಧಿ ತಲುಪಿದ ನಂತರ ಉಳಿದ ಆಭಿಮಾನಿಗಳ ಹಾಗೆ ಇವರು ಸಹ ತಮ್ಮ ನೇತ್ರದಾನಕ್ಕೆ ಸಹಿ ಹಾಕಲಿದ್ದಾರೆ. ತಮ್ಮ ಈ ಅಭಿಮಾನದ ಯಾತ್ರೆಗೆ ಮತ್ತು ನೇತ್ರದಾನದ ಜಾಗೃತಿಗೆ ಅಪ್ಪು ಅಭಿಮಾನಿಗಳೆಲ್ಲ ಸಹಕರಿಸಿ, ಕೈಜೋಡಿಸಬೇಕೆಂದು ಗುರುಪ್ರಕಾಶ್ ವಿನಂತಿಸಿದ್ದಾರೆ. ಇವರ ಅಭಿಮಾನವನ್ನು ಹೊಗಳಲು ನೆಟ್ಟಿಗರು ಪದಗಳ ಹುಡುಕಾಟದಲ್ಲಿ ಬಿದ್ದಿದ್ದಾರೆ ಎಂದೇ ಹೇಳಬೇಕು. ಗುರುಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವವರು ಎಂಬುದು ಇಲ್ಲಿ ಗಮರ್ನಾಹ.

ಈ ಹಿಂದೆಯೇ ಮೂರು ಮಕ್ಕಳ ತಾಯಿಯೊಬ್ಬರು ನಟ ಪುನೀತ್ ರಾಜ್​ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು 500 ಕಿ.ಮೀ. ಓಟ ಆರಂಭಿಸಿದ್ದಾರೆ. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದಾಕ್ಷಾಯಣಿ ಓಟದ ಮೂಲಕ ಬೆಂಗಳೂರು ತಲುಪಿ ಪುನೀತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ನವೆಂಬರ್ 30 ರಂದು ಮ್ಯಾರಥಾನ್ ಆರಂಭಿಸಿದ್ದಾರೆ. ಸ್ವಗ್ರಾಮದಿಂದ ಪುನೀತ್​ರ ಸಮಾಧಿವರೆಗೂ ಅಂದರೆ ಮನಗುಂಡಿ ಗ್ರಾಮದಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೋ ತಲುಪಲಿದ್ದಾರೆ. ಪ್ರತಿದಿನ ಸುಮಾರು 30 ಕಿಲೋಮೀಟರ್ ಓಡಲಿರುವ ದಾಕ್ಷಾಯಿಣಿ ಹನ್ನೆರಡು ದಿನಗಳಲ್ಲಿ ಬೆಂಗಳೂರು ತಲುಪುವ ಗುರಿ ಇಟ್ಟುಕೊಂಡಿದ್ದಾರೆ.

ಜೊತೆಗೆ, ಹಲವು ಅಭಿಮಾನಿಗಳು ಈಗಾಗಲೇ ರಕ್ತದಾನ, ಅನ್ನದಾನ, ನೇತ್ರದಾನ ಹಾಗೂ ಇತರ ಸಮಾಜ ಸೇವೆ ಅಥವಾ ವಿಶೇಷ ಸ್ಮರಣೆ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರೀತಿಯನ್ನು ತಿಳಿಸುತ್ತಿದ್ದಾರೆ. ಬಹುಶಃ, ಅಪ್ಪು ಬದುಕಿದ್ದರೆ ಈ ಡೈ ಹಾರ್ಡ್ ಅಭಿಮಾನಿಗಳ ಪ್ರೀತಿ ಕಂಡು ಅವರ ಮನಸ್ಸು ಭಾರವಾಗುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net