

ಬೆಂಗಳೂರು: ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡದ ಹಿರಿಯ ನಟ ಶಿವರಾಂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ನಿರ್ದೇಶಕ ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಅವರಿಗೆ 83 ವರ್ಷ ವಯಸ್ಸಾಗಿತ್ತು. ಮನೆಯಲ್ಲಿ ಬಿದ್ದು ತಲೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ನಗರದ ಪ್ರಶಾಂತ್ ಆಸ್ಪತ್ರೆ ಸೇರಿದ್ದ ಶಿವರಾಂ ಅವರ ಮೆದುಳು ನಿಷ್ಕ್ರಿಯಗೊಂಡ ಕಾರಣ ಮರಣ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಕನ್ನಡದ ಮೇರುನಟರಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರುಗಳೊಂದಿಗೆ ಅಭಿನಯ ಮಾಡಿದ್ದ ಶಿವರಾಮಣ್ಣ ಎಂದೇ ಖ್ಯಾತರಾಗಿದ್ದ ಅವರು, 1965ರಲ್ಲಿ 'ಬೆರೆತ ಜೀವ' ಸಿನಿಮಾದ ಮೂಲಕ ನಟನೆ ಆರಂಭಿಸಿದವರು. ಕೆ.ಎಸ್.ಎಲ್. ಸ್ವಾಮಿ, ಪುಟ್ಟಣ್ಣ ಕಣಗಾಲ್ರಂತಹ ನಿರ್ದೇಶಕರ ಜೊತೆಗೆ ಸಹನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.
ಅಣ್ಣ ರಾಮ್ನಾಥ್ ಜೊತೆಗೆ ಜಂಟಿ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಅಣ್ಣಾವ್ರ 'ಹೃದಯ ಸಂಗಮ' ಸಿನಿಮಾಗೆ ನಿರ್ದೇಶನ ಕೂಡ ಮಾಡಿದ್ದ ಶಿವರಾಂ ಹಾಗೂ ರಾಮ್ನಾಥ್ ಅವರು ರಾಶಿ ಬ್ರದರ್ಸ್ ಅಂತಲೇ ಖ್ಯಾತಿ ಗಳಿಸಿದ್ದ ಸಹೋದರರು. ಸೂಪರ್ ಹಿಟ್ ಚಿತ್ರ 'ಶರಪಂಜರ' ಸಿನಿಮಾ ನಿರ್ಮಾಣ ಮಾಡಿದ್ದು ಶಿವರಾಮ್ ಅವರೇ.
ತಲೆಗೆ ಪೆಟ್ಟು: ಕಳೆದ ವಾರ ಕಾರಿನಲ್ಲಿ ಹೊರಗೆ ಹೋಗಿದ್ದ ವೇಳೆ ಕಾರು ಆಕ್ಸಿಡೆಂಟ್ ಆಗಿತ್ತು. ಆಗ ಶಿವರಾಂ ಅವರನ್ನು ಕರೆತಂದು ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಲಾಗಿತ್ತು. ಎಲ್ಲವೂ ನಾರ್ಮಲ್ ಎಂಬಂತೆ ಕಂಡುಬಂದಿತ್ತು. ಅದಾದ ಬಳಿಕ ಮನೆಯಲ್ಲಿ ಅಯ್ಯಪ್ಪನ ಪೂಜೆ ಮಾಡಲು ರೂಂಗೆ ಹೋಗಿದ್ದರು. ಆ ವೇಳೆ ರೂಂನಲ್ಲಿ ಕೆಳಗೆ ಬಿದ್ದು, ತಲೆಗೆ ಮತ್ತೆ ಬಲವಾದ ಪೆಟ್ಟಾಗಿರುವುದು ತಿಳಿದುಬಂತು. ಸ್ಕ್ಯಾನಿಂಗ್ ಮಾಡಿಸಿದ್ದಾಗ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಯಿತು. ಅಲ್ಲಿಯೇ ಕೋಮಾಕ್ಕೆ ಜಾರಿದ್ದ ನಟ ಶಿವರಾಂ ಮೆದುಳು ನಿಷ್ಕ್ರಿಯಗೊಂಡು ಕೊನೆಯುಸಿರೆಳೆದಿದ್ದಾರೆ.