ಸಂಪಾದಕೀಯ | ಸೂಕ್ತವಾದ ಹೆಜ್ಜೆ

ವಿಜಯವಾಣಿ (3)
Published on

ಭಾರತದ ವಿರುದ್ಧ ಕಾರ್ಯಾಚರಿಸಲು, ಇಲ್ಲಿನ ಹಿತಾಸಕ್ತಿಗಳಿಗೆ ಧಕ್ಕೆ ಒದಗಿಸಲು ಹಲವು ರಾಷ್ಟ್ರಗಳು ಸದಾ ಪ್ರಯತ್ನಶೀಲವಾಗಿ ಇರುತ್ತವೆ. ಇದಕ್ಕಾಗಿ ಹೊಸ ಹೊಸ ಮಾರ್ಗ, ಕುತಂತ್ರ, ಷಡ್ಯಂತ್ರಗಳನ್ನು ಹುಡುಕುತ್ತಲೇ ಇರುತ್ತವೆ. ಹಾಗಾಗಿ, ರಾಷ್ಟ್ರೀಯ ಭದ್ರತೆ ಎಂಬುದು ತುಂಬ ಸೂಕ್ಷ್ಮ ವಿಷಯ. ಅದರಲ್ಲೂ, ಕೆಲ ರಾಜಕಾರಣಿಗಳು ವಿವೇಚನೆ ಇಲ್ಲದೆ ಬೇಜವಾಬ್ದಾರಿಯಿಂದ ನೀಡುವ ಹೇಳಿಕೆಗಳು ಮತ್ತಷ್ಟು ಹಾನಿ ಸೃಷ್ಟಿಸುತ್ತವೆ. ರಾಜಕಾರಣಿಯೂ ಆಗಿರುವ ಉದ್ಯಮಿಯೊಬ್ಬರು ಇತ್ತೀಚೆಗಷ್ಟೇ, ‘ಚೀನಾ ಭಾರತಕ್ಕೆ ಶತ್ರುರಾಷ್ಟ್ರವಲ್ಲ, ಮಿತ್ರರಾಷ್ಟ್ರ. ನಮ್ಮ ಮನೋಭಾವ ಬದಲಾಗಬೇಕಿದೆ’ ಎಂದಿದ್ದರು. ಚೀನಾ ಭಾರತದ ವಿರುದ್ಧ ಏನೆಲ್ಲ ಕುತಂತ್ರ ಮಾಡುತ್ತಿದೆ, ನಮ್ಮ ನೆರೆರಾಷ್ಟ್ರಗಳಲ್ಲಿ ಭಾರತವಿರೋಧಿ ಭಾವನೆಯನ್ನು ಹೇಗೆ ಪ್ರಚೋದಿಸುತ್ತಿದೆ ಎಂಬುದು ಗೊತ್ತಿರುವಂಥದ್ದೇ. ಅಲ್ಲದೆ, ಗಡಿಯಲ್ಲೂ ಆಗಾಗ ತಕರಾರು, ಕಿರಿಕಿರಿ ಇದ್ದದ್ದೇ.

ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಭಾರತಕ್ಕೆ ಹಾನಿ ಮಾಡಲು ಚೀನಾ ಯತ್ನಿಸುತ್ತಿರುವುದು ಅದು ಸೃಷ್ಟಿಸುತ್ತಿರುವ ಅಪಾಯದ ಇನ್ನೊಂದು ಗಂಭೀರ ಮುಖ. ಹೀಗೆ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂಥ ಚಟುವಟಿಕೆಗಳ ವಿರುದ್ಧ ಕೇಂದ್ರ ಸರ್ಕಾರ ಕಾರ್ಯಾಚರಣೆಯನ್ನು ಇತ್ತೀಚೆಗೆ ಚುರುಕುಗೊಳಿಸಿರುವುದು ಸ್ವಾಗತಾರ್ಹ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುತ್ತಿದ್ದ 119 ಆಪ್​ಗಳನ್ನು ಕೇಂದ್ರ ಸರ್ಕಾರ ಗುರುವಾರ ನಿಷೇಧಿಸಿ, ಆದೇಶ ಹೊರಡಿಸಿದೆ. ಈ ಪೈಕಿ ಹೆಚ್ಚಿನವು ಚೀನಾ ಮತ್ತು ಹಾಂಕಾಂಗ್ ಆಪ್​ಗಳೇ ಆಗಿವೆ ಎಂಬುದು ಗಮನಾರ್ಹ. ಇಂಥ ಅಪಾಯಗಳನ್ನು ಅರಿತು 2020ರಲ್ಲಿಯೂ ಟಿಕ್​ಟಾಕ್ ಸಮೇತ 100, 2021ರಲ್ಲಿ 22 ಆಪ್​ಗಳನ್ನು ನಿಷೇಧಿಸಲಾಗಿತ್ತು. ಈ ಬಾರಿ 119 ಆಪ್​ಗಳ ವಿರುದ್ಧ ಇಂಥ ಕ್ರಮ ಕೈಗೊಂಡಿರುವುದು ಸೂಕ್ತವಾಗಿಯೇ ಇದೆ. ವಿಡಿಯೋ ಹಾಗೂ ವಾಯ್ಸ್​ ಚಾಟ್​ಗಳ ಸೌಲಭ್ಯ ಒದಗಿಸುವ ಆಪ್​ಗಳು ಹೆಚ್ಚಿನ ಪ್ರಮಾಣದಲ್ಲಿ ನಿಷೇಧಕ್ಕೆ ಒಳಗಾಗಿವೆ.

ಕೆಲ ದುರುಳರು ಉದ್ದೇಶಪೂರ್ವಕವಾಗಿಯೇ ಇಂಥ ರಾಷ್ಟ್ರವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದು, ತಾವು ಕಾನೂನಿನ ಕೈಗೆ ಸಿಲುಕುವುದಿಲ್ಲ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಇಂಥ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇರಿಸಿರುವ ಕೇಂದ್ರ ಸರ್ಕಾರವು ಆಗಾಗ ಗದಾಪ್ರಹಾರ ನಡೆಸುತ್ತಲೇ ಇದೆ. ಖಾಸಗಿತನಕ್ಕೆ ಧಕ್ಕೆ ಒದಗಿಸುವ, ಮಾಹಿತಿ ಕದಿಯುವ ಇಂಥ ಆಪ್​ಗಳ ಬಗ್ಗೆ ಜನಸಾಮಾನ್ಯರು ಕೂಡ ಎಚ್ಚರಿಕೆ ವಹಿಸಬೇಕು. ಮತ್ತೊಂದೆಡೆ, ಮನರಂಜನೆ ಹೆಸರಿನಲ್ಲಿ ಅಶ್ಲೀಲತೆಯನ್ನು ಹರಡುತ್ತಿರುವ ಒಟಿಟಿ ವೇದಿಕೆಗಳಿಗೂ ಬಿಸಿ ತಟ್ಟಿದೆ. ಮಾಹಿತಿ ತಂತ್ರಜ್ಞಾನ ನಿಯಮ-2021ರಲ್ಲಿ ನಿಗದಿಪಡಿಸಲಾಗಿರುವ ನೀತಿ ಸಂಹಿತೆಯನ್ನು ಪಾಲಿಸುವಂತೆ ಕೇಂದ್ರ ಸರ್ಕಾರ, ಸಾಮಾಜಿಕ ಮಾಧ್ಯಮ ವಾಹಿನಿಗಳು ಮತ್ತು ಒಟಿಟಿ ವೆಬ್​ಸೈಟ್​ಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.

ಅಲ್ಲದೆ, ಮಕ್ಕಳು ಅಶ್ಲೀಲ ಅಂಶಗಳನ್ನು ವೀಕ್ಷಿಸುವುದನ್ನು ತಡೆಯಲು ಖಾತರಿಪಡಿಸುವ ನಿಟ್ಟಿನಲ್ಲಿ ‘ಎ’ ರೇಟೆಡ್ ಕಂಟೆಂಟ್​ಗಳ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವಂತೆಯೂ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಗುರುವಾರ ಅಧಿಸೂಚನೆಯಲ್ಲಿ ತಿಳಿಸಿದ್ದು, ನೈತಿಕತೆ ಪಾಲನೆ ಮಾಡುವಂತೆ ಸೂಚಿಸಿದೆ. ಇತ್ತೀಚಿನ ದಿನಗಳಲ್ಲಿ ಕೆಲ ಸಾಮಾಜಿಕ ಜಾಲತಾಣಗಳು ಹಾಗೂ ಒಟಿಟಿ ವೇದಿಕೆಗಳು ಎಲ್ಲೆ ಮೀರಿ ವರ್ತಿಸುತ್ತಿದ್ದು, ಅವು ನೀಡುವ ಕಂಟೆಂಟ್​ಗಳು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಒದಗಿಸುತ್ತಿವೆ. ಹದಿಹರೆಯದವರು ಮತ್ತು ಯುವಕರ ದಾರಿ ತಪ್ಪಿಸುತ್ತಿವೆ. ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳಲು ಅಸಭ್ಯ ವಿಚಾರ, ದೃಶ್ಯಾವಳಿಗಳನ್ನು ನೀಡುವ ಇಂಥ ವೇದಿಕೆಗಳು ನೈತಿಕತೆಗೆ ಮರಳದಿದ್ದರೆ, ಮುಂಬರುವ ದಿನಗಳಲ್ಲಿ ನಿಷೇಧದ ಕ್ರಮವನ್ನೇ ಎದುರಿಸಬೇಕಾಗುತ್ತದೆ. ಹಾಗಾಗುವ ಮುನ್ನವೇ ಎಚ್ಚೆತ್ತುಕೊಂಡು, ಒಳ್ಳೆಯ ಅಭಿರುಚಿಯ ಹಾಗೂ ಜನರ ಮನಸ್ಸನ್ನು ಅರಳಿಸುವ ಉತ್ತಮ ವಿಚಾರಗಳನ್ನು ನೀಡುವಂತಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net