

ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದು, ಬಳಿಕ ಆತ ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಈ ಪ್ರಕರಣವು, ರಾಜ್ಯದಲ್ಲಿ ಕೆಲಸ ಹುಡುಕಿಕೊಂಡು ಅನ್ಯ ರಾಜ್ಯಗಳಿಂದ ವಲಸೆ ಬರುವವರ ಮೇಲೆ ಸೂಕ್ತ ನಿಗಾ ಇಡುವ ಅಗತ್ಯವನ್ನೂ ಮನಗಾಣಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕಾರ್ವಿುಕ ಸಚಿವ ಸಂತೋಷ ಲಾಡ್ ಮಂಗಳವಾರ ಬೆಂಗಳೂರಿನಲ್ಲಿ ಉದ್ಯೋಗದಾತರು, ಕಾರ್ವಿುಕರು, ಕಾರ್ವಿುಕ ಸಂಘಟನೆಗಳು ಮತ್ತು ಅಧಿಕಾರಿಗಳ ಜಂಟಿ ಸಭೆಯನ್ನು ನಡೆಸಿದರು.
ಹೊರ ರಾಜ್ಯಗಳಿಂದ ವಲಸೆ ಬರುವ ಕಾರ್ವಿುಕರ ಮೇಲೆ ನಿಗಾವಹಿಸಲು ಎಲ್ಲ ಇಲಾಖೆಗಳ ಸಹಕಾರದೊಂದಿಗೆ ವಿಶೇಷ ಕಾಯ್ದೆ ತರಲು ತೀರ್ಮಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಕಾರ್ವಿುಕರ ಉದ್ಯೋಗ, ಯೋಗಕ್ಷೇಮ, ಕನಿಷ್ಠ ಕೂಲಿ ಜತೆಗೆ ಸುರಕ್ಷತಾ ಕ್ರಮಗಳಿಗೂ ಆದ್ಯತೆ ನೀಡಲು ಸರ್ಕಾರ ಚಿಂತನೆ ನಡೆಸಿರುವುದು ಸೂಕ್ತವಾಗಿದೆ. ಒಂದೇ ಇಲಾಖೆಯಿಂದ ವಲಸೆ ಕಾರ್ವಿುಕರ ನಿಯಂತ್ರಣ ಸಾಧ್ಯವಿಲ್ಲ. ಎಲ್ಲ ಇಲಾಖೆಗಳ ಸಮನ್ವಯ, ಸಹಕಾರ ಬೇಕು. ಅನ್ಯ ರಾಜ್ಯಗಳ ಕಾರ್ವಿುಕರ ಕುರಿತು ಮಾಹಿತಿ ಪಡೆಯಲು ಸಭೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ತಿಳಿಸಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ. ಸ್ಥಳಿಯವಾಗಿ ಕಾರ್ವಿುಕರ ಲಭ್ಯತೆ, ವಲಸೆ ಕಾರ್ವಿುಕರ ಅನಿವಾರ್ಯತೆಯನ್ನು ಸಭೆಯಲ್ಲಿ ಭಾಗವಹಿಸಿದವರು ವಿವರಿಸಿದ್ದು ಸಹ ಗಮನಿಸಬೇಕಾದ ಸಂಗತಿ.
ಏಕೆಂದರೆ, ನಮ್ಮದು ಪ್ರಜಾಪ್ರಭುತ್ವ ದೇಶ. ಯಾರು ಎಲ್ಲಿ ಬೇಕಾದರೂ ನೆಲೆಸಲು ಹಾಗೂ ಕೆಲಸ ಮಾಡಲು ಅವಕಾಶವಿದೆ. ವ್ಯಕ್ತಿಯೊಬ್ಬ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಸಕಾರಣವಿಲ್ಲದೆ ಅವನನ್ನು ನಿರ್ಬಂಧಿಸಲು ಆಗದು. ಸಂಘಟಿತ ಕಾರ್ವಿುಕರ ಬಗ್ಗೆ ಪಕ್ಕಾ ಲೆಕ್ಕದ ಜತೆಗೆ ವಿವರಗಳು ಸಿಗುತ್ತವೆ. ಆದರೆ ಅಸಂಘಟಿತ ವಲಯದಲ್ಲಿ ಇಂಥ ಅಂಕಿಅಂಶ ಸಿಗುವುದು ಕಷ್ಟ. ವಿಶೇಷವಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಕೆಲಸ ಅರಸಿ ಬರುವವರ ಸಂಖ್ಯೆ ಅಧಿಕ. ನಿತ್ಯ ಸಾವಿರಾರು ಜನರು ಬರುತ್ತಿರುತ್ತಾರೆ. ಇವತ್ತಿನ ವಾತಾವರಣದಲ್ಲಿ ಕುಶಲ ಕರ್ವಿುಗಳಿಗೆ ಬಹು ಬೇಡಿಕೆ ಇದೆ. ಕೆಲವು ವಲಯದ ಕೆಲಸಗಳಿಗೆ ಸ್ಥಳೀಯವಾಗಿ ಕಾರ್ವಿುಕರು ಸಿಗುವುದಿಲ್ಲ.
ಹೊರಗಿನ ಜನ ಅನಿವಾರ್ಯ. ಹೀಗೆ ಬರುವ ವಲಸೆ ಕಾರ್ವಿುಕರ ಬಗ್ಗೆ ಸರ್ಕಾರದಲ್ಲಿ ಒಂದಷ್ಟು ಮಾಹಿತಿ ಇದೆ ಎಂದಾದಲ್ಲಿ ಒಂದೊಮ್ಮೆ ಏನಾದರೂ ಅಹಿತಕರ ಘಟನೆಗಳಾದಲ್ಲಿ ಮಾಹಿತಿ ಸಂಗ್ರಹ ಸುಲಭವಾಗುತ್ತದೆ. ಅದಲ್ಲದೆ, ಅವರಲ್ಲಿ ಕೂಡ ಸರ್ಕಾರ ತಮ್ಮ ಮೇಲೆ ನಿಗಾ ಇಟ್ಟಿರುತ್ತದೆ ಎಂದು ಎಚ್ಚರಿಕೆ ಇರುತ್ತದೆ. ಆದರೆ ಈ ನಿಟ್ಟಿನಲ್ಲಿ ಕಾನೂನು ರೂಪಿಸುವಾಗ ಶ್ರಮಸಂಸ್ಕೃತಿಗೆ ಧಕ್ಕೆ ಆಗದಂತೆ ಎಚ್ಚರ ವಹಿಸುವುದು ಅಗತ್ಯ. ಹಾಗೇ ವಲಸೆ ಕಾರ್ವಿುಕರ ಕ್ಷೇಮದ ಬಗ್ಗೆಯೂ ಗಮನಬೇಕಾಗುತ್ತದೆ. ಇಲ್ಲಿ ಉದ್ಯೋಗದಾತರ ಜವಾಬ್ದಾರಿಯೂ ಇದೆ ಎಂಬುದನ್ನು ಮರೆಯುವಂತಿಲ್ಲ. ಮಾದಕವಸ್ತು ಹಾವಳಿ, ಸಾಮಾನ್ಯ ಅಪರಾಧ ಕೃತ್ಯಗಳ ಜೊತೆಗೆ ಸೈಬರ್ ಅಪರಾಧಗಳು ಸಹ ಹೆಚ್ಚಿರುವುದರಿಂದ ಎಚ್ಚರಿಕೆ ಕ್ರಮ ಅನಿವಾರ್ಯ. ಸರ್ಕಾರಿ ಇಲಾಖೆಗಳ ಸಮನ್ವಯ ಸಹ ಇಲ್ಲಿ ಮುಖ್ಯವಾಗುತ್ತದೆ.