ಒಪಿಎಸ್ ಜಾರಿಗೆ ಸೂಕ್ತ ನಿರ್ಧಾರ: ಸಿಎಂ ಸಿದ್ದರಾಮಯ್ಯ ಭರವಸೆ

xafa
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹೊಸ ಪಿಂಚಣಿ ಯೋಜನೆ (ಎನ್​ಪಿಎಸ್) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಅಧ್ಯಯನ ಸಮಿತಿಯ ವರದಿ ಬಂದ ತಕ್ಷಣ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರಿ ನೌಕರರಿಗೆ ಭರವಸೆ ನೀಡಿದ್ದಾರೆ.

ವೇತನ ಪರಿಷ್ಕರಣೆ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಶನಿವಾರ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ‘ನಮ್ಮಭಿಮಾನದ ಅಭಿನಂದನೆ’ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಸಿಎಂ ಮಾತನಾಡಿದರು. ಒಪಿಎಸ್ ಜಾರಿ ಸಂಬಂಧ ಅಧ್ಯಯನಕ್ಕಾಗಿ ಸಮಿತಿ ರಚಿಸಲಾಗಿದೆ. ಅದಷ್ಟೂ ಬೇಗ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಕೈಸೇರಿದ ತಕ್ಷಣ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ ಎಂದರು.

ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯರೂಪಕ್ಕೆ ತರಲಾಗುವುದು. ಈ ಬಗ್ಗೆ ಅದೇಶ ಹೊರಡಿಸಲಾಗಿದೆ. ಪದವೀಧರ ಶಿಕ್ಷಕರ ವೇತನ ಸಮಸ್ಯೆ ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿ ಅನ್ಯಾಯ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುವುದು ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿಗೂ ಕ್ರಮವಹಿಸಲಾಗುವುದೆಂದು ಸಿಎಂ ಭರವಸೆ ನೀಡಿದರು.

ಅಂಬೇಡ್ಕರ್, ಗಾಂಧಿ, ಬಸವಾದಿ ಶರಣರು ಸಮಸಮಾಜದ ಕನಸು ಕಂಡಿದ್ದರು. ಇವರೆಲ್ಲರ ಕನಸನ್ನು ನನಸು ಮಾಡುವ ಜವಾಬ್ದಾರಿ ನಮ್ಮಲ್ಲರ ಮೇಲಿದೆ. ಕೆಲಕಾರಣಗಳಿಂದ ಉಂಟಾಗಿರುವ ಸಾಮಾಜಿಕ, ಆರ್ಥಿಕ ಅಸಮತೋಲನ ನಿವಾರಿಸಿ ಸಮಸಮಾಜ ನಿರ್ವಿುಸಬೇಕು. ಸರ್ಕಾರದ ಯೋಜನೆ, ಕಾರ್ಯಕ್ರಮಗಳು ಶೋಷಿತ ಸಮುದಾಯಗಳ ಮನೆ ಬಾಗಿಲಿಗೆ ತಲುಪಿಸಿದಾಗ ಮಾತ್ರ ನಮ್ಮಲ್ಲರ ಶ್ರಮ ಸಾರ್ಥಕವಾಗಲಿದೆ. ಹೀಗಾಗಿ, ನಾವೆಲ್ಲರೂ ಸೇರಿ ಸ್ವಾಸ್ಥ್ಯ ಸಮಾಜ ರೂಪಿಸಬೇಕಿದೆ ಎಂದು ಸಲಹೆ ನೀಡಿದರು. ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಕೆ.ಗೋವಿಂದರಾಜ್, ನಸೀರ್ ಅಹ್ಮದ್, ಎಂಎಲ್ಸಿ ಪ್ರಕಾಶ್ ರಾಥೋಡ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎ.ಅಮೃತ್​ರಾಜ್ ಸೇರಿ 50 ಸಾವಿರಕ್ಕೂ ಅಧಿಕ ನೌಕರರಿದ್ದರು.

ಭದ್ರತಾ ವೈಫಲ್ಯ: ‘ನಮ್ಮಭಿಮಾನದ ಅಭಿನಂದನೆ’ ಸಮಾರಂಭ ಭದ್ರತಾ ವೈಫಲ್ಯಕ್ಕೆ ಸಾಕ್ಷಿಯಾಯಿತು. ಸಿಎಂ ಭಾಷಣ ಮುಗಿಸಿ ವೇದಿಕೆಯ ಅಸನದಲ್ಲಿ ಕುಳಿತುಕೊಂಡಿದ್ದಾಗ ಯುವಕನೊಬ್ಬ ವೇದಿಕೆ ಮುಂಭಾಗದಿಂದ ಓಡಿ ಒಂದು ಶಾಲು ಹೊದಿಸಲು ಪ್ರಯತ್ನಿಸಿದ. ಕೂಡಲೇ ಪೊಲೀಸರು, ಅಕ್ಕಪಕ್ಕದವರು ಆತನನ್ನು ತಡೆದರು. ಯುವಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ಹೊರೆಯಾದರೂ ನೌಕರರ ಪರ ಇದ್ದೇವೆ: 4ನೇ ವೇತನ ಆಯೋಗದ ವರದಿ ಜಾರಿಗೊಳಿಸುವಾಗ ಜೆ.ಎಚ್.ಪಟೇಲ್ ಸಂಪುಟದಲ್ಲಿ ಹಣಕಾಸು ಸಚಿವನಾಗಿದ್ದೆ. 2018ರಲ್ಲಿ 6ನೇ ವೇತನ ಆಯೋಗ, 2024ರಲ್ಲಿ 7ನೇ ವೇತನ ಆಯೋಗ ಜಾರಿ ಮಾಡಿದ್ದೇನೆ. 6ನೇ ವೇತನ ಆಯೋಗ ಜಾರಿಗೆ 10,500 ಕೋಟಿ ರೂ., 7ನೇ ವೇತನ ಆಯೋಗ ಅನುಷ್ಠಾನಕ್ಕೆ 20 ಸಾವಿರ ಕೋಟಿ ರೂ.ವೆಚ್ಚವಾಗಬಹುದು. ಆದರೂ, ಇದು ಹೊರೆಯಲ್ಲ. ವೇತನ ಆಯೋಗದ ಶಿಫಾರಸು ಜಾರಿಗೆ ತರುವ ಮೂಲಕ ಎಂದಿಗೂ ನಮ್ಮ ಸರ್ಕಾರ ನೌಕರರ ಪರವಾಗಿ ಇದೆ ಎಂದು ಸಿಎಂ ವಿವರಿಸಿದರು. ಸರ್ಕಾರಿ ನೌಕರರು ತಮ್ಮ ಬೇಡಿಕೆಗಳನ್ನು ಮಂಡಿಸುತ್ತಲೇ ಜನರ ಪರವಾಗಿ ಕೆಲಸ ಮಾಡಬೇಕು. ನಾವು, ನೀವು ಸೇರಿದರೆ ಮಾತ್ರ ಒಳ್ಳೆಯ ಸರ್ಕಾರವಾಗಲಿದೆ. ಜನರು ಕಟ್ಟುವ ತರಿಗೆ ಹಣವನ್ನು ದುರ್ಬಲ ವರ್ಗದವರ ಅಭಿವೃದ್ಧಿಗೆ ವಿನಿಯೋಗಿಸಿದರೆ ನಮ್ಮ ಬದುಕು ಸಾರ್ಥಕವಾಗಲಿದೆ ಎಂದರು.

ಸಮಿತಿ ಪುನಾರಚನೆ: ರಾಷ್ಟ್ರೀಯ ಪಿಂಚಣಿ ಯೋಜನೆ ಸಂಬಂಧ ಈಗಾಗಲೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯನ್ನು ಪುನರ್ ರಚಿಸಲಾಗಿದೆ. ಐಎಎಸ್ ಅಧಿಕಾರಿ ಅಂಜುಂ ಪರ್ವೆಜ್ ಸಮಿತಿ ಅಧ್ಯಕ್ಷರಾಗಿ, ರಿತೇಶ್ ಕುಮಾರ್ ಸಿಂಗ್, ಅಮ್ಲಾನ್ ಆದಿತ್ಯ ಬಿಸ್ವಾಸ್, ಡಾ.ಆರ್. ವಿಶಾಲ್ ಸದಸ್ಯರಾಗಿ ಮತ್ತು ಡಾ.ಎಂ.ಟಿ.ರೇಜು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಹಳೆಯ ಪಿಂಚಣಿ ಮರು ಜಾರಿ ಮಾಡಿರುವ ರಾಜ್ಯಗಳಿಗೆ ತೆರಳಿ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸರ್ಕಾರಿ ಕಾರ್ಯಕ್ರಮ ಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದು. ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿ ಆಗಿರುವ ಅನ್ಯಾಯ ಸರಿ ಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಸಿದ್ದರಾಮಯ್ಯ ಸಮಸ್ಯೆ ಈಡೇರಿಸಲು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

| ಮಧು ಬಂಗಾರಪ್ಪ ಶಿಕ್ಷಣ ಸಚಿವ

ಸರ್ಕಾರಿ ನೌಕರರ ಸಂಘದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಅದಷ್ಟು ಬೇಗ ಹಳೆ ಪಿಂಚಣಿ ಯೋಜನೆ ಜಾರಿಗೆ ಬಂದರೆ ಲಕ್ಷಾಂತರ ನೌಕರರಿಗೆ ಅನುಕೂಲವಾಗಲಿದೆ. 7ನೇ ವೇತನ ಆಯೋಗವನ್ನು ಜಾರಿಗೆ ಮಾಡಿದ್ದಕ್ಕಾಗಿ ಸಿಎಂ ಸಿದ್ದರಾಮಯ್ಯನವರಿಗೆ ಕೃತಜ್ಞತೆ ಸಲ್ಲಿಸ ಲಾಗಿದೆ. ಆರೋಗ್ಯ ಸಂಜೀವಿನಿ ಯೋಜನೆ ಕಾರ್ಯರೂಪಕ್ಕೆ ತರಲು ಸರ್ಕಾರ ಸ್ಪಂದಿಸಿದೆ.

| ಸಿ.ಎಸ್.ಷಡಾಕ್ಷರಿ

ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net