ಸಂಪಾದಕೀಯ | ಸೂಕ್ತ ಕ್ರಮ ಅಗತ್ಯ

Untitled design
Published on

ರಾಜ್ಯದಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚುತ್ತಲೇ ಇದೆ. ಕಾಡುಪ್ರಾಣಿಗಳ ದಾಳಿಯಿಂದ ಅರಣ್ಯದಂಚಿನ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿರುವುದು ನಿಜಕ್ಕೂ ಆತಂಕಕಾರಿ. ಇದರಿಂದ ಕಾಡಂಚಿನ ಜನರು ದೈನಂದಿನ ಸಂಚಾರಕ್ಕೂ ಭಯ ಪಡುವಂಥ ಸ್ಥಿತಿ ಸೃಷ್ಟಿಯಾಗಿದೆ. ಅಲ್ಲದೆ, ಬೆಳೆಗಳು ನಷ್ಟವಾಗುತ್ತಿದ್ದು, ರೈತರ ಸಂಕಷ್ಟಕ್ಕೆ ಸ್ಪಂದಿಸುವವರು ಇಲ್ಲದಂತಾಗಿದೆ. ಯಾವೆಲ್ಲ ಬೆಳೆಹಾನಿಗೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂಬ ಸೂಕ್ತ ಮಾಹಿತಿಯೂ ರೈತರಲ್ಲಿಲ್ಲ. ಈ ಕುರಿತು ಅರಿವು ಮೂಡಿಸುವ ಕೆಲಸ ಅಧಿಕಾರಿಗಳಿಂದ ಆಗಿಲ್ಲ.

‘ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ಭಾಗದಲ್ಲಿ ಆರರಿಂದ ಎಂಟು ಹುಲಿಗಳು ಕಾಡಿನಿಂದ ಹೊರಬಂದಿವೆ. ಇವುಗಳನ್ನು ಸೆರೆ ಹಿಡಿಯಲು ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಗಿದೆ. ಹುಲಿ ದಾಳಿ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ ಅರಣ್ಯ ಇಲಾಖೆಯ ಒಬ್ಬರನ್ನು ಅಮಾನತುಗೊಳಿಸಲಾಗಿದೆ’ ಎಂದು ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಆದರೆ, ಅಧಿಕಾರಿಗಳ ಅಮಾನತಿನಿಂದ ಮಾತ್ರ ಸಮಸ್ಯೆ ಬಗೆಹರಿಯುವುದಿಲ್ಲ. ಹುಲಿಗಳು ಪದೇಪದೆ ನಾಡಿಗೆ ಏಕೆ ಬರುತ್ತಿವೆ, ಅವುಗಳ ಆವಾಸಸ್ಥಾನ ‘ಅಭಿವೃದ್ಧಿ’ ಹೆಸರಲ್ಲಿ ಕಬಳಿಸಲಾಗಿದೆಯೇ ಅಥವಾ ಆವಾಸಸ್ಥಾನಗಳು ಅಪಾಯಕ್ಕೆ ಸಿಲುಕಿರುವುದರಿಂದ ಅವು ನಾಡಿಗೆ ಬರುತ್ತಿವೆಯೇ ಎಂಬುದರ ಬಗ್ಗೆಯೂ ವಾಸ್ತವದ ನೆಲೆಗಟ್ಟಿನಲ್ಲಿ ಪರಾಮರ್ಶೆ ನಡೆಯಬೇಕು.

ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷದ ಸ್ವರೂಪ ಒಂದೇ ರೀತಿಯದಾಗಿಲ್ಲ ಮತ್ತು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಈ ಸಮಸ್ಯೆಗೆ ಭಿನ್ನ ಆಯಾಮಗಳಿವೆ. ಕಾಡುಗಳ ನಾಶದ ವೇಗ ಹೆಚ್ಚಿರುವುದು ಮತ್ತು ಕಾಡಿನ ವೈವಿಧ್ಯತೆಗೆ ಧಕ್ಕೆ ಬಂದಿರುವುದು ಸಮಸ್ಯೆಯನ್ನು ಮತ್ತಷ್ಟು ಕ್ಲಿಷ್ಟಕರವಾಗಿಸಿದೆ. ಮಲೆನಾಡಿನಲ್ಲಿ ಮಂಗಗಳ ಹಾವಳಿ ವಿಪರೀತವಾಗಿದೆ. ಕಾಡಿನಲ್ಲಿ ಅಕೇಶಿಯಾ, ನೀಲಗಿರಿ ನೆಡುತೋಪು ಹೆಚ್ಚಿರುವುದರಿಂದ ಸಸ್ಯ ವೈವಿಧ್ಯ ಇಲ್ಲದಂತಾಗಿದೆ. ಇದರಿಂದ ಮಂಗಗಳು ಆಹಾರ ಹುಡುಕಿಕೊಂಡು ತೋಟಗಳಿಗೆ ಲಗ್ಗೆ ಇಟ್ಟು, ಬೆಳೆಗಳನ್ನು ಹಾನಿ ಮಾಡುತ್ತಿವೆ. ‘ಮಂಕಿ ಪಾರ್ಕ್’ ಸ್ಥಾಪನೆ ಅವೈಜ್ಞಾನಿಕ ಎಂಬ ಕಾರಣಕ್ಕಾಗಿ ಯೋಜನೆಯನ್ನು ಕೈಬಿಡಲಾಗಿದೆ. ಆದರೆ, ಪರ್ಯಾಯ ಉಪಾಯಗಳನ್ನು ಶೋಧಿಸಬೇಕಲ್ಲವೆ? ಮಲೆನಾಡಿನಲ್ಲಿ ಆನೆಗಳ ದಾಳಿಯೂ ಆಗಾಗ ಮರುಕಳಿಸುತ್ತಲೇ ಇದೆ. ಕಾಡುಕೋಣಗಳ ದಾಳಿ ತಲ್ಲಣ ಸೃಷ್ಟಿಸಿದೆ.

ಬಯಲುಸೀಮೆಯ ಜಿಲ್ಲೆಗಳಲ್ಲಿ ನವಿಲುಗಳ ಹಾವಳಿ ಹೆಚ್ಚಿದ್ದು, ರೈತರು ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂದು ಚಿಂತಿತರಾಗಿದ್ದಾರೆ. ಕಾಡಿನಲ್ಲಿ ಆಹಾರ ಸಿಗದೆ ಈ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ ಎಂದು ರೈತರು ಹೇಳುತ್ತಿದ್ದಾರೆ. ಅಡಿಕೆ, ತೆಂಗಿನಂಥ ವಾಣಿಜ್ಯ ಬೆಳೆಗಳು ನಷ್ಟವಾಗುತ್ತಿವೆ. ತರಕಾರಿಗಳು ಕೂಡ ಇದಕ್ಕೆ ಹೊರತಲ್ಲ. ಹೀಗಾಗಿ, ರೈತರು ಚಿಂತಾಕ್ರಾಂತರಾಗಿದ್ದು ಮುಂದೇನು ಎಂದು ತಿಳಿಯದೆ ಕೈಚೆಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬುವುದು ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಪಾತ್ರವೂ ಮಹತ್ವದ್ದಾಗಿದೆ. ಮಾನವ, ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕು, ಈ ಸಮಸ್ಯೆಯ ವಿರುದ್ಧ ಇತರ ರಾಜ್ಯಗಳು ಕೈಗೊಳ್ಳುತ್ತಿರುವ ಪರಿಹಾರಕ್ರಮಗಳು ಮತ್ತು ಅವು ನೀಡಿರುವ ಫಲಿತಾಂಶಗಳ ಬಗ್ಗೆಯೂ ಸೂಕ್ತ ಅಧ್ಯಯನ ನಡೆಸಬೇಕು. ಈ ಸಂಘರ್ಷ ಮತ್ತಷ್ಟು ವಿಕೋಪಕ್ಕೆ ಹೋಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು, ಕ್ರಮಕ್ಕೆ ಮುಂದಾಗುವುದು ಅಗತ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net